ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಾಮಾಜಿಕ ನ್ಯಾಯ, ಜಾತ್ಯತೀತತೆಯ ವಿರೋಧಿ: ಮಲ್ಲಿಕಾರ್ಜುನ ಖರ್ಗೆ

Published 11 ಮಾರ್ಚ್ 2024, 14:30 IST
Last Updated 11 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತಾರೂಢ ಬಿಜೆಪಿಯು ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ವಿರೋಧಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ತಿದ್ದುಪಡಿಯ ಏಕೈಕ ಉದ್ದೇಶಕ್ಕಾಗಿ ಬಿಜೆಪಿಯು ಭಾರಿ ಬಹುಮತದ ಜನಾದೇಶ ಅಪೇಕ್ಷಿಸುತ್ತಿದೆ. ಸಂವಿಧಾನವನ್ನು ಬಿಜೆಪಿಯು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಿಲ್ಲ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ’ ಎಂದು ಹೇಳಿದರು. 

‘ಒಂದೆಡೆ ಯಾವುದೇ ಕಾರಣಕ್ಕೂ ಸಂವಿಧಾನವನ್ನು ಬದಲಾವಣೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಮತ್ತೊಂದೆಡೆ ಸಂವಿಧಾನದ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ತಮ್ಮ ಜನರ ಮೂಲಕ ಹೇಳಿಸುತ್ತಾರೆ. ಸಂವಿಧಾನ ತಿದ್ದುಪಡಿ ಕುರಿತು ಯಾವುದೊ ಒಂದು ಸಂಘಟನೆ ಹೇಳಿಲ್ಲ. ಬದಲಾಗಿ ಬಿಜೆಪಿಯ ಸಂಸದರೊಬ್ಬರು ಹೇಳಿದ್ದಾರೆ. ಇದು ಒಳ್ಳೆಯ ಮನಃಸ್ಥಿತಿಯಲ್ಲ. ನೀವು ಸಂವಿಧಾನ ಬದಲಾವಣೆ ಮಾಡಬೇಕು ಎಂದುಕೊಂಡರೆ, ದೇಶದಲ್ಲಿ ವಿಪ್ಲವ ನಿರ್ಮಾಣವಾಗಲಿದೆ’ ಎಂದು ಎಚ್ಚರಿಕೆ ನೀಡಿದರು. 

‘ನಮ್ಮ ಪಕ್ಷದ ಯಾರೊಬ್ಬರಾದರೂ ಇಂಥ ಹೇಳಿಕೆಯನ್ನು ನೀಡಿದ್ದರೆ, ಅಂಥದವನ್ನು ನಾನು ಪಕ್ಷದಿಂದ ತೆಗೆದುಹಾಕುತ್ತಿದ್ದೆ. ಅವರಿಗೆ ಧೈರ್ಯವಿದ್ದರೆ ಮತ್ತು ಅಂಬೇಡ್ಕರ್ ಅವರಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಸಂವಿಧಾನ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಗಳನ್ನು ಪಕ್ಷದಿಂದ ತೆಗೆದುಹಾಕಬೇಕು ಮತ್ತು ಅಂಥ ವ್ಯಕ್ತಿಗೆ ಲೋಕಸಭಾ ಟಿಕೆಟ್ ನೀಡಬಾರದು’ ಎಂದು ಆಗ್ರಹಿಸಿದರು. 

ಪಿ.ಚಿದಂಬರಂ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ‘ಸಂವಿಧಾನ ತಿದ್ದುಪಡಿ ಮಾಡಬೇಕೆಂಬ ಬಿಜೆಪಿಯ ಉದ್ದೇಶವು ಎಂದಿಗೂ ರಹಸ್ಯವಾಗಿರಲಿಲ್ಲ. ಖಾಸಗಿ ಸಮಾಲೋಚನೆ ವೇಳೆ ಭಾರತವು ಹಿಂದೂ ರಾಷ್ಟ್ರವಾಗಬೇಕು ಮತ್ತು ಹಿಂದಿ ಭಾರತದ ಏಕಮಾತ್ರ ಅಧಿಕೃತ ಭಾಷೆಯಾಗಬೇಕು. ಅಲ್ಲದೆ, ಕೇಂದ್ರ ಸರ್ಕಾರವು ಬಲಿಷ್ಠವಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳಿಗಿಂತ ಮೇಲುಗೈ ಸಾಧಿಸಬೇಕು ಎಂಬುದಾಗಿ ಹತ್ತಾರು ಬಿಜೆಪಿ ಮುಖಂಡರು ಹೇಳಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿಗೆ ಸಂವಿಧಾನವೇ ಇರಿಸುಮುರಿಸು’

ನವದೆಹಲಿ: ಸರ್ವಾಧಿಕಾರದ ಯೋಜನೆಗಳನ್ನು ಹೊಂದಿರುವ ಬಿಜೆಪಿಗೆ ಸಂವಿಧಾನವು ದೊಡ್ಡ ತೊಡಕು ಆಗಿದ್ದು ದೇಶವನ್ನು ಸರ್ವಾಧಿಕಾರಿ ರಾಷ್ಟ್ರವಾಗಿ ಬದಲಾವಣೆ ಮಾಡಲು ಬಿಜೆಪಿಯು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಈ ಕುರಿತು ‘ಎಕ್ಸ್’ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ‘ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂಬ ಅನಂತಕುಮಾರ್ ಹೆಗಡೆ ಅವರ ಹೇಳಿಕೆಯು ಅವರ ಮನದ ಮಾತಾಗಿದೆ. ಅವರು ತಮ್ಮ ಹೃದಯದಲ್ಲಿ ಎಂದಿಗೂ ಸಂವಿಧಾನದ ಪರ ನಿಲುವು ಹೊಂದಿಲ್ಲ ಅಥವಾ ಸಂವಿಧಾನದ ಮೌಲ್ಯಗಳನ್ನು ಎಂದಿಗೂ ಅವರು ಒಪ್ಪಿಕೊಂಡಿಲ್ಲ’ ಎಂದು ಆರೋಪಿಸಿದರು. 

‘ದೇಶವನ್ನು ಅಧಿಕೃತವಾಗಿ ನಿರಂಕುಶ ಪ್ರಭುತ್ವಕ್ಕೆ ಒಳಪಡಿಸಲು 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ. ಆದರೆ ಪ್ರಜಾಪ್ರಭುತ್ವ ಎಂಬುದು ಭಾರತೀಯ ಸಮಾಜದ ರಕ್ತದಲ್ಲಿ ಹಾಸುಹೊಕ್ಕಾಗಿದ್ದು ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸುವ ಸಂವಿಧಾನ ವಿರೋಧಿ ಪಡೆಗಳನ್ನು ತಿರಸ್ಕರಿಸಲಿದೆ’ ಎಂದು ಹೇಳಿದರು.

‘ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿಯ ಮಾತೃ ಸಂಸ್ಥೆ ಬಯಸಿತ್ತು. ಒಂದೆಡೆ ಸಂಯುಕ್ತ ವ್ಯವಸ್ಥೆಯ ಸಿದ್ಧಾಂತಗಳು ಸಮತೋಲನಗಳನ್ನು ಉಪೇಕ್ಷಿಸಲಾಗುತ್ತಿದ್ದರೆ ಚುನಾವಣಾ ಆಯೋಗ ಅಥವಾ ನ್ಯಾಯಾಂಗದ ರೀತಿಯ ಸಾಂವಿಧಾನಿಕ ಸಂಸ್ಥೆಗಳು ಕೂಡ ರಾಜೀ ಆಗಿರುವುದನ್ನು ನಾವು ಕಾಣುತ್ತಿದ್ದೇವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT