ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಸಿಎಂ, ಸಚಿವರ ಬಳಿ 3 ಸಾವಿರ ಕಡತ ಬಾಕಿ: ಬಿಜೆಪಿ ಆರೋಪ

Published 27 ಏಪ್ರಿಲ್ 2024, 7:28 IST
Last Updated 27 ಏಪ್ರಿಲ್ 2024, 7:28 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ವಿವಿಧ ಸಚಿವರು ಬಳಿ ಮಹತ್ವದ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 3 ಸಾವಿರಕ್ಕೂ ಹೆಚ್ಚು ಕಡತಗಳು ಬಾಕಿ ಇವೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ, ‘ಕೇಜ್ರಿವಾಲ್‌ ಸರ್ಕಾರವು ಉತ್ತಮ ಆಡಳಿತ ನೀಡುವುದರ ಬದಲಾಗಿ ಪ್ರಚಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ. ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 3,060 ಕಡತಗಳು ಬಾಕಿ ಉಳಿದಿದ್ದು, ವಿವಿಧ ಇಲಾಖೆಗಳಲ್ಲಿ ಧೂಳು ಹಿಡಿಯುತ್ತಿವೆ. ಅಲ್ಲದೆ, ಪ್ರಮುಖ ಕಾಮಗಾರಿಗಳಿಗೆ ಸಂಬಂಧಿಸಿದ 420 ಕಡತಗಳು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ಬಳಿ ಬಾಕಿ ಉಳಿದುಕೊಂಡಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಧಿಕೃತ ದಾಖಲೆಗಳ ಪ್ರತಿಗಳನ್ನು ಪ್ರದರ್ಶಿಸುವ ಮೂಲಕ ‘ಗರೀಬ್‌ ಸಂಜೀವಿನಿ ಆಯುಷ್ಮಾನ್‌ ಯೋಜನೆ’ ಮತ್ತು ದೆಹಲಿ ಜಲ ನೀತಿ ಕಡತಗಳು ಸುಮಾರು ಏಳು ವರ್ಷಗಳಿಂದ ಮುಖ್ಯಮಂತ್ರಿ ಅವರ ಬಳಿ ಬಾಕಿ ಉಳಿದುಕೊಂಡಿವೆ ಎಂದು ಅವರು ಹೇಳಿದ್ದಾರೆ.

ಎಎಪಿ ಸರ್ಕಾರ ಅಭಿವೃದ್ಧಿ ಬಗ್ಗೆ ಕಡಿಮೆ ಆಸಕ್ತಿ ಹೊಂದಿದ್ದು, ಪ್ರಚಾರ ಮತ್ತು ಭ್ರಷ್ಟಾಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂಬುದನ್ನು ಬಾಕಿ ಉಳಿದಿರುವ ಕಡತಗಳು ಸ್ಪಷ್ಟಪಡಿಸುತ್ತವೆ. ಆದರೂ, ಅವರು ದೆಹಲಿ ಜನರ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಎಂದು ಸಚ್‌ದೇವ ಆರೋಪಿಸಿದ್ದಾರೆ.

ಸಚ್‌ದೇವ ಅವರ ಆರೋಪಕ್ಕೆ ತಿರುಗೇಟು ನೀಡಿರುವ ದೆಹಲಿ ಎಎಪಿ ಘಟಕದ ಕಾರ್ಯದರ್ಶಿ ರೀನಾ ಗುಪ್ತಾ, ‘ಬಿಜೆಪಿ ಮಾಡುತ್ತಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಪತ್ರಿಕಾಗೋಷ್ಠಿಯಲ್ಲಿ ಅವರು ತೋರಿಸಿರುವ ದಾಖಲೆಗಳು ನಕಲಿಯಾಗಿವೆ. ಈಗಾಗಲೇ ಕಾಮಗಾರಿ ಮುಗಿದಿರುವ ಕಡತಗಳನ್ನು ತೋರಿಸುವ ಮೂಲಕ ದೆಹಲಿ ಜನತೆಯನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT