ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಟಿಎಂಸಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿವೆ: ಕಾಂಗ್ರೆಸ್

Last Updated 22 ಜನವರಿ 2021, 4:53 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಉಸ್ತುವಾರಿ ಜಿತಿನ್‌ ಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ. ಈ ಎರಡೂ ಪಕ್ಷಗಳು ಬಂಗಾಳ ವಿಧಾನಸಭೆ ಚುನಾವಣೆಯನ್ನು ಮುಖ್ಯವಾಗಿರಿಸಿ ಪರಸ್ಪರ ಆರೋಪಗಳನ್ನು ಮಾಡುವ ಮೂಲಕ ಜನರ ಗಮನವನ್ನು ರಾಜ್ಯದ ಪ್ರಮುಖ ಸಮಸ್ಯೆಗಳ ಬದಲು ಬೇರೆಡೆಗೆ ತಿರುಗಿಸುತ್ತಿವೆ ಎಂದು ಜಿತಿನ್‌ ಆರೋಪಿಸಿದ್ದಾರೆ.

‘ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ಆರೋಪ ಮಾಡುತ್ತಿವೆ. ಟಿಎಂಸಿ ಸರ್ಕಾರ ಹಾಗೂ ಎನ್‌ಡಿಎ ಸರ್ಕಾರ ಪಶ್ಚಿಮ ಬಂಗಾಳ ಹಾಗೂ ಸಾರ್ವಜನಿಕರಿಗಾಗಿ ಏನು ಮಾಡಿವೆ ಎಂದು ಹೇಳುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿವೆ’ ಎಂದು ಕಿಡಿಕಾರಿದ್ದಾರೆ. ಮುಂದುವರಿದುಸುಭಾಷ್‌ ಚಂದ್ರಬೋಸ್‌ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಹಾಗೂ ಸುಭಾಷ್ ಚಂದ್ರಬೋಸ್‌ ಅವರಿಗೆ ಸಂಬಂಧಿಸಿದ ದಾಖಲೆ ಬಿಡುಗಡೆಗೆ ಆಗ್ರಹಿಸುವ ಟಿಎಂಸಿ ಕುರಿತು ಮಾತನಾಡಿರುವ ಪ್ರಸಾದ್‌, ‘ಸುಭಾಷ್‌ ಚಂದ್ರಬೋಸ್‌ ಅವರು ದೇಶದ,ವಿಶೇಷವಾಗಿ ಪಶ್ಚಿಮ ಬಂಗಾಳದ ಹೆಮ್ಮೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಅವರನ್ನು ಚುನಾವಣೆ ಹತ್ತಿರವಾಗುತ್ತಿರುವಾಗ ನೆನಪಿಸಿಕೊಳ್ಳುತ್ತಿರುವುದೇಕೆ? ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಸೂಚಿಯೊಂದಿಗೆ ಮತ್ತು ರಾಜ್ಯದ ಜನರಿಗೆ ಪರ್ಯಾಯ ಆಯ್ಕೆಗಾಗಿ ಕಾಂಗ್ರೆಸ್‌–ಎಡ ಪಕ್ಷಗಳು ಬಂಗಾಳದಲ್ಲಿ ಚುನಾವಣಾ ಕಣಕ್ಕಿಳಿಯಲಿವೆ’ ಎಂದು ತಿಳಿಸಿದ್ದಾರೆ.

ಮಿತ್ರಪಕ್ಷಗಳೊಂದಿಗೆ ಕ್ಷೇತ್ರ ಹಂಚಿಕೆ ಬಗ್ಗೆ ಮಾತನಾಡಿರುವ ಅವರು, ‘ಈ ಕುರಿತು ರಾಜ್ಯದ ಹಿರಿಯ ನಾಯಕರ ಸಮಿತಿ ರಚಿಸಲಿದ್ದೇವೆ. ಅವರು ಪಕ್ಷ ಹಾಗೂ ರಾಜ್ಯದ ಜನರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲು ಮುಕ್ತರಾಗಿರಲಿದ್ದಾರೆ. ಅವರು ಎಡ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಸಿದ್ಧಪಡಿಸಲಿದ್ದಾರೆ. ಅದಾದ ಬಳಿಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಲಿದ್ದೇವೆ. ಎರಡೂ ಪಕ್ಷಗಳಿಗೆ ಕಠಿಣ ಸ್ಪರ್ಧೆಯೊಡ್ಡಲಿದ್ದೇವೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.ಇದುವರೆಗೆ ಎಡ ಪಕ್ಷಗಳು ಹಾಗೂ ಕಾಂಗ್ರೆಸ್‌ ನಾಲ್ಕು ಬಾರಿ ಸಭೆ ನಡೆಸಿವೆ.

ಬಾಂಗಾಳ ವಿಧಾನಸಭೆಗೆ 294 ಸದಸ್ಯರ ಬಲವಿದೆ. ಕಳೆದ ಚುನಾವಣೆಯಲ್ಲಿ 92 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉಳಿದ ಕಡೆಗಳಲ್ಲಿ ಸ್ಪರ್ಧಿಸಿದ್ದ ಎಡಪಕ್ಷಗಳಿಗೆ ದಕ್ಕಿದ್ದು ಕೇವಲ 32 ಸ್ಥಾನ ಮಾತ್ರ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಹೆಚ್ಚು ಕಡೆ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT