ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಸಿಎಂ ಸ್ಥಾನಕ್ಕೆ ಹೊಸ ಮುಖ? ವಸುಂಧರಾ ಆಯ್ಕೆ ಕ್ಷೀಣ

ಮಧ್ಯಪ್ರದೇಶ, ಛತ್ತೀಸಗಢದಂತೆ ಅಚ್ಚರಿಯ ಬೆಳವಣಿಗೆ ಸಾಧ್ಯತೆ
Published 11 ಡಿಸೆಂಬರ್ 2023, 20:19 IST
Last Updated 11 ಡಿಸೆಂಬರ್ 2023, 20:19 IST
ಅಕ್ಷರ ಗಾತ್ರ

ಜೈಪುರ: ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ನಡೆದಂತೆಯೇ ರಾಜಸ್ಥಾನದಲ್ಲೂ ಅಚ್ಚರಿಯ ಬೆಳವಣಿಗೆ ನಡೆಯಬಹುದು ಎನ್ನಲಾಗುತ್ತಿದ್ದು, ಹೊಸಬರು ಉನ್ನತ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಗಳಿವೆ.

ರಾಜಸ್ಥಾನದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಬಿಜೆಪಿಯ ಕೇಂದ್ರ ವೀಕ್ಷಕರು ಮಂಗಳವಾರ ಘೋಷಿಸುವ ಸಾಧ್ಯತೆ ಇದೆ. ಈ ಸಂಬಂಧ ಅವರು ಮಂಗಳವಾರ ಸಂಜೆ 4 ಗಂಟೆಗೆ ಪಕ್ಷದ ಚುನಾಯಿತ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕ, ಕೇಂದ್ರದ ಮಾಜಿ ಸಚಿವ ವಿಷ್ಣುದೇವ್ ಸಾಯ್ (59) ಹಾಗೂ ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಯನ್ನಾಗಿ ಒಬಿಸಿ ನಾಯಕ ಹಾಗೂ ಆರ್‌ಎಸ್‌ಎಸ್‌ ಹಿನ್ನೆಲೆಯ ಮೋಹನ್‌ ಯಾದವ್‌ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಈ ಮೂಲಕ ಹೊಸ ಮುಖಗಳಿಗೆ ಮತ್ತು ಕೆಳ ಹಂತದಲ್ಲಿ ಕಾರ್ಯ ನಿರ್ವಹಿಸಿದ ನಾಯಕರಿಗೆ ಅವಕಾಶ ನೀಡಿದೆ.

ಈ ಎರಡೂ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳೇ ಔಪಚಾರಿಕವಾಗಿ ಹೊಸಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಛತ್ತೀಸಗಢ ಮತ್ತು ಮಧ್ಯ ಪ್ರದೇಶದ ಶಾಸಕಾಂಗ ಪಕ್ಷದ ನಾಯಕರ ಹೆಸರನ್ನು ಕ್ರಮವಾಗಿ ಮಾಜಿ ಸಿ.ಎಂ ರಮಣ್ ಸಿಂಗ್‌ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್‌ ಪ್ರಸ್ತಾಪಿಸಿದ್ದಾರೆ.

ರಮಣ್‌ ಸಿಂಗ್‌ (71) ಅವರು ಛತ್ತೀಸಗಢ ಮತ್ತು ನರೇಂದ್ರ ಸಿಂಗ್‌ ತೋಮರ್‌ (66) ಅವರು ಮಧ್ಯಪ್ರದೇಶದ ವಿಧಾನಸಭೆಯ ಸ್ಪೀಕರ್‌ ಆಗುವ ಸಾಧ್ಯತೆಗಳಿವೆ. ಈ ಮೂಲಕ ಈ ಹಿರಿಯ ನಾಯಕರಿಗೆ ಗೌರವಯುತ ಸ್ಥಾನಗಳನ್ನು ನೀಡಿದಂತಾಗುತ್ತದೆ. ನಂತರ ಕ್ರಮೇಣವಾಗಿ ಅವರನ್ನು ಚುನಾವಣಾ ರಾಜಕೀಯದಿಂದ ದೂರ ಸರಿಸುವ ಸಾಧ್ಯತೆಗಳೂ ಇವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

ಅಷ್ಟೇನು ಮುಂಚೂಣಿ ನಾಯಕರಾಗದಿದ್ದರೂ, ಸಂಘಟನೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ ನಾಯಕರಿಗೆ ಉನ್ನತ ಹುದ್ದೆ ಒಲಿದು ಬರುತ್ತದೆ ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ ಎನ್ನುತ್ತಾರೆ ಅವರು.

ವಸುಂಧರಾ ಆಯ್ಕೆ ಕ್ಷೀಣ

ಮಧ್ಯಪ್ರದೇಶದಲ್ಲಿ ‘ಲಾಡ್ಲಿ ಬೆಹನಾ’ ಯೋಜನೆಯ ಜೊತೆಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಕಾರಣರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಬಿಜೆಪಿ ಅವಕಾಶ ನೀಡದಿರುವಾಗ, ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಮತ್ತೆ ಅವಕಾಶ ನೀಡುತ್ತದೆಯಾ? ಈ ಸಾಧ್ಯತೆ ತೀರಾ ಕಡಿಮೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

ಈ ಎರಡೂ ರಾಜ್ಯಗಳಲ್ಲಿ ಅಳವಡಿಸಿದ ಸೂತ್ರವನ್ನೇ ರಾಜಸ್ಥಾನದಲ್ಲೂ ಅಳವಡಿಸುವ ನಿರೀಕ್ಷೆ ಇದೆ. ಅಲ್ಲಿನಂತೆಯೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಹೊಸಬರ ಮೇಲೆ ಪಕ್ಷ ಒಲವು ತೋರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅವರು ವಿಶ್ಲೇಷಿಸುತ್ತಾರೆ.

ಆದರೆ ಈ ಕಾರ್ಯ ರಾಜಸ್ಥಾನದಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ಚುನಾವಣೆ ಫಲಿತಾಂಶದ ಬಳಿಕ ವಸುಂಧರಾ ರಾಜೆ ಅವರನ್ನು 43 ಶಾಸಕರು ಭೇಟಿಯಾಗಿದ್ದಾರೆ. ಇದು ಒಂದು ರೀತಿಯಲ್ಲಿ ಶಕ್ತಿ ಪ್ರದರ್ಶನದ ಎಂದೇ ಹೇಳಲಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ಚೌಹಾಣ್‌ ಅವರು ತನ್ನನ್ನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿಕೊಂಡಿದ್ದರು, ಆದರೆ ರಾಜೆ ಅವರು ಈ ರೀತಿ ಎಲ್ಲೂ ಹೇಳಿಲ್ಲ.

ಮಗನನ್ನು ಬೆಳೆಸಲು ರಾಜೆ ಉತ್ಸುಕ

ರಾಜೆ ಅವರು ತಮ್ಮ ಪುತ್ರ ದುಷ್ಯಂತ್ ಸಿಂಗ್ (ಸಂಸದ) ಅವರೊಂದಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದರು. ಈ ವೇಳೆ ನಡೆದ ಮಾತುಕತೆ ಬಗ್ಗೆ ತಿಳಿದಿಲ್ಲವಾದರೂ, ರಾಜೆ ಅವರು ಉನ್ನತ ಹುದ್ದೆಗೆ ತನ್ನನ್ನು ಪರಿಗಣಿಸುವಂತೆ ಕೇಳಿರಬಹುದು ಎಂಬ ಊಹಾಪೋಹಗಳಿವೆ. ಇಲ್ಲದಿದ್ದರೆ ತನ್ನ ಮಗನಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ನೀಡುವಂತೆಯೂ ಅವರು ಕೋರಿರಬಹುದು ಎನ್ನಲಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಜಲಾವರ್‌ನ ರ್‍ಯಾಲಿಯಲ್ಲಿ ಮಾತನಾಡಿದ್ದ ರಾಜೆ ಅವರು, ‘ನನ್ನ ಮಗನಿಗೆ ನೀವು ಚೆನ್ನಾಗಿಯೇ ತರಬೇತಿ ನೀಡಿದ್ದೀರಿ. ಹೀಗಾಗಿ ನನಗೆ ನಿವೃತ್ತಿ ಹೊಂದಬೇಕು ಅನಿಸುತ್ತಿದೆ. ಆದರೆ ಸದ್ಯಕ್ಕೆ ನಿವೃತ್ತಿ ಆಗುವುದಿಲ್ಲ’ ಎಂದಿದ್ದರು. ಈ ಮೂಲಕ ಅವರು ಬಹುಶಃ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಸಂಕೇತ ನೀಡಿರಬಹುದು. ಆ ಮೂಲಕ ತನ್ನ 50 ವರ್ಷದ ಮಗನಿಗೆ ಹಾದಿ ಸುಗಮ ಮಾಡಿಕೊಡುವ ನಿಟ್ಟಿನಲ್ಲಿ ಚಿಂತಿಸಿರಬಹುದು ಎಂದೂ ರಾಜಕೀಯ ತಜ್ಞರು ವಿಶ್ಲೇಷಿಸುತ್ತಾರೆ.

‘ಎಲ್ಲ ಶಾಸಕರೊಂದಿಗೆ ವಿಶ್ವಾಸದಿಂದ ಕೆಲಸ ಮಾಡುವವರು, ಪಕ್ಷದ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆಯನ್ನು ತಡೆಯುವ ಶಕ್ತಿ ಇರುವವರು ಮತ್ತು ಆಡಳಿತಾತ್ಮಕ ಸಾಮರ್ಥ್ಯ ಹಾಗೂ ಸಂಘಟನಾತ್ಮಕ ಚತುರತೆಯ ಅನುಭವ ಇರುವ ವ್ಯಕ್ತಿ ಮುಖ್ಯಮಂತ್ರಿಯಾಗಬಹುದು’ ಎಂದು ಬಿಜೆಪಿಯ ರಾಜಸ್ಥಾನ ಘಟಕದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಸುನೀಲ್‌ ಭಾರ್ಗವ ಪ್ರತಿಕ್ರಿಯಿಸಿದ್ದಾರೆ.

ಹೊಸ ತಲೆಮಾರಿನ ನಾಯಕರಾದ ದಿಯಾ ಕುಮಾರಿ, ರಾಜ್ಯವರ್ಧನ್ ರಾಥೋಡ್ ಮತ್ತು ಬಾಲಕನಾಥ್ ಅವರ ಹೆಸರುಗಳೂ ಪರಿಗಣನೆಯಲ್ಲಿ ಇರಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT