ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಯಲ್ಲಿಯೇ ಬಿಜೆಪಿ ಶಾಸಕನಿಂದ ಗುಂಡು: ಶಿವಸೇನಾದ ಇಬ್ಬರು ನಾಯಕರಿಗೆ ಗಾಯ

Published 3 ಫೆಬ್ರುವರಿ 2024, 4:35 IST
Last Updated 3 ಫೆಬ್ರುವರಿ 2024, 4:35 IST
ಅಕ್ಷರ ಗಾತ್ರ

ಠಾಣೆ/ಮುಂಬೈ (ಪಿಟಿಐ): ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರು ಪೊಲೀಸ್‌ ಠಾಣೆಯಲ್ಲಿಯೇ ಶುಕ್ರವಾರ ರಾತ್ರಿ ಶಿವಸೇನಾ (ಶಿಂದೆ ಬಣ) ನಾಯಕರಿಬ್ಬರಿಗೆ ಗುಂಡು ಹಾರಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಈ ಸಂಬಂಧ ಕಲ್ಯಾಣ್‌ ಕ್ಷೇತ್ರದ ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌, ಹರ್ಷಲ್‌ ಕೇನೆ, ಸಂದೀಪ್‌ ಸರ್ವಾಂಕರ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ 307 (ಕೊಲೆ ಯತ್ನ), 120ಬಿ (ಅಪರಾಧ ಸಂಚು) ಸೇರಿದಂತೆ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಿದ್ದು, ಉಳಿದವರ ಪತ್ತೆಗಾಗಿ ನಾಲ್ಕು ತಂಡ ರಚಿಸಿದ್ದಾರೆ.

ಇದರ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ರಾಜೀನಾಮೆಗೆ ಆಗ್ರಹಿಸಿವೆ.

ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ಹೊರಡಿಸಿದ್ದಾರೆ. ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವ ಸಂದರ್ಭದಲ್ಲಿ ಶಾಸಕರು ಗುಂಡು ಹಾರಿಸಿದರು ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ಫಡಣವೀಸ್‌ ಹೇಳಿದರು.

ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ‘ಇದು ದುರದೃಷ್ಟಕರ ಘಟನೆ’ ಎಂದರು.

ಘಟನೆ ವಿವರ:

ಉಲ್ಲಾಸ್‌ನಗರ ಪ್ರದೇಶದ ಹಿಲ್‌ಲೈನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೊಠಡಿಯೊಳಗೆ ಈ ಘಟನೆ ನಡೆದಿದೆ. ಕಲ್ಯಾಣ ಕ್ಷೇತ್ರದಲ್ಲಿ ಶಿಂದೆ ನೇತೃತ್ವದ ಶಿವಸೇನಾದ ಮುಖ್ಯಸ್ಥ ಮಹೇಶ್‌ ಗಾಯಕ್ವಾಡ್‌ ಅವರ ಮೇಲೆ ಬಿಜೆಪಿಯ ಶಾಸಕ ಗಣಪತ್‌ ಗಾಯಕ್ವಾಡ್‌ ಗುಂಡು ಹಾರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ದತ್ತಾತ್ರಯ ಶಿಂದೆ ಸುದ್ದಿಗಾರರಿಗೆ ತಿಳಿಸಿದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಗಣಪತ್‌ ಅವರ ಮಗ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದಿದ್ದರು. ಅದೇ ವೇಳೆ ಮಹೇಶ್‌ ತನ್ನ ಜನರೊಂದಿಗೆ ಅಲ್ಲಿಗೆ ಬಂದರು. ಕೆಲ ಹೊತ್ತಿನಲ್ಲಿ ಶಾಸಕ ಗಣಪತ್‌ ಕೂಡ ಬಂದರು. ಈ ವೇಳೆ ಶಾಸಕರು ಮತ್ತು ಶಿವಸೇನಾ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಇನ್‌ಸ್ಪೆಕ್ಟರ್‌ ಕೊಠಡಿಯೊಳಗೆ ಶಾಸಕರು ಮಹೇಶ್‌ ಅವರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಮಹೇಶ್‌ ಮತ್ತು ಅವರ ಆಪ್ತ ರಾಹುಲ್‌ ಪಾಟೀಲ್‌ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ವಿವರಿಸಿದರು. 

‘ಮಗನನ್ನು ಥಳಿಸುತ್ತಿದ್ದರು’:

ಬಂಧನಕ್ಕೂ ಮುನ್ನ ಖಾಸಗಿ ಸುದ್ದಿವಾಹಿನಿಯೊಂದಿಗೆ ಪ್ರತಿಕ್ರಿಯಿಸಿದ ಶಾಸಕ ಗಣಪತ್ ಗಾಯಕ್ವಾಡ್‌, ‘ಪೊಲೀಸ್ ಠಾಣೆಯಲ್ಲಿ ಮಗನನ್ನು ಥಳಿಸಲಾಗುತ್ತಿತ್ತು. ಹೀಗಾಗಿ ನಾನು ಬಂದೂಕನ್ನು ಬಳಸಿದ್ದೇನೆ. ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರು ಮಹಾರಾಷ್ಟ್ರದಲ್ಲಿ ಅಪರಾಧಿಗಳ ಸಾಮ್ರಾಜ್ಯ ಸ್ಥಾಪಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಏಕನಾಥ ಶಿಂದೆ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಅಪರಾಧಿಗಳು ಮಾತ್ರ ಹುಟ್ಟುತ್ತಾರೆ. ನನ್ನಂತಹ ಒಳ್ಳೆಯ ವ್ಯಕ್ತಿಯನ್ನೂ ಅವರು ಇಂದು ಅಪರಾಧಿಯನ್ನಾಗಿ ಮಾಡಿದ್ದಾರೆ’ ಎಂದ ಅವರು, ಆತ್ಮರಕ್ಷಣೆಗಾಗಿ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದರು. 

ಜಮೀನು ವಿವಾದದ ಕುರಿತು ಮಾತನಾಡಿದ ಅವರು, ‘10 ವರ್ಷಗಳ ಹಿಂದೆ ನಾನು ನಿವೇಶನ ಖರೀದಿಸಿದ್ದೆ. ಕೆಲ ಕಾನೂನು ಸಮಸ್ಯೆಗಳಿವೆ. ಆದರೆ ಮಹೇಶ್‌ ಗಾಯಕ್ವಾಡ್‌ ಬಲವಂತವಾಗಿ ಇದನ್ನು ಅತಿಕ್ರಮಿಸಿದ್ದಾರೆ. ಈ ಕುರಿತು ದೂರು ನೀಡಲು ನನ್ನ ಮಗ ಉಲ್ಲಾಸನಗರದ ಪೊಲೀಸ್‌ ಠಾಣೆಗೆ ಹೋಗಿದ್ದರು’ ಎಂದು ಅವರು ವಿವರಿಸಿದರು.

ವಿರೋಧ ಪಕ್ಷಗಳ ವಾಗ್ದಾಳಿ:

‘ಈ ಘಟನೆ ಕಳವಳಕಾರಿ ಆಗಿದ್ದು, ಅಧಿಕಾರದ ದುರುಪಯೋಗಕ್ಕೂ ಮಿತಿಯಿದೆ’ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದರೆ, ‘ಈ ಘಟನೆಗೆ ಮುಖ್ಯಮಂತ್ರಿ ಶಿಂದೆಯೇ ಕಾರಣ’ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌ ಆರೋಪಿಸಿದ್ದಾರೆ. 

‘ಗೃಹ ಸಚಿವರು (ಫಡಣವೀಸ್‌) ಬಿಜೆಪಿ ನಾಯಕರಿಗೆ ಕಾನೂನು ಮತ್ತು ಸುವ್ಯವಸ್ಥೆಯೊಂದಿಗೆ ಆಟವಾಡಲು ಮುಕ್ತ ಪರವಾನಗಿ ಕೊಟ್ಟಿದ್ದಾರೆಯೇ’ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ.  

‘ಶಾಸಕರು ತಪ್ಪಿತಸ್ಥರು ಎಂದು ಸಾಬೀತಾದರೆ, ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬಾವಂಕುಳೆ ತಿಳಿಸಿದ್ದಾರೆ. ‘ಚುನಾಯಿತ ಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ’ ಎಂದು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಪ್ರತಿಕ್ರಿಯಿಸಿದ್ದಾರೆ. 

ಸಿಸಿಟಿವಿ ದೃಶ್ಯ: ಸತ್ಯ ಹೊರಬರುತ್ತದೆ

‘ಬಿಜೆಪಿ ಶಾಸಕ ಗಣಪತ್‌ ಗಾಯಕ್ವಾಡ್‌ ಅವರು ಶುಕ್ರವಾರ ರಾತ್ರಿ ಪೊಲೀಸ್‌ ಠಾಣೆಯಲ್ಲಿ ನಮ್ಮ ಪಕ್ಷದ ಮಹೇಶ್‌ ಗಾಯಕ್ವಾಡ್‌ ಮತ್ತು ರಾಹುಲ್‌ ಪಾಟೀಲ್‌ ಅವರ ಮೇಲೆ ಗುಂಡು ಹಾರಿಸಿರುವ ಕುರಿತ ಪೊಲೀಸ್‌ ಠಾಣೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಾರ್ವಜನಿಕವಾಗಿ ಬಿತ್ತರವಾಗುತ್ತಿದ್ದು, ಸತ್ಯ ಹೊರಬರಲಿದೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಮಗನೂ ಆಗಿರುವ ಕಲ್ಯಾಣ್‌ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್‌ ಶಿಂದೆ ಪ್ರತಿಕ್ರಿಯಿಸಿದ್ದಾರೆ. 

ಮಹೇಶ್‌ ಗಾಯಕ್ವಾಡ್‌ ಅವರ ದೇಹದಿಂದ ಆರು ಗುಂಡುಗಳನ್ನು ಹಾಗೂ ರಾಹುಲ್‌ ಪಾಟೀಲ್‌ ಅವರ ದೇಹದಿಂದ ಎರಡು ಗುಂಡುಗಳನ್ನು ವೈದ್ಯರು ತೆಗೆದಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಇದ್ದಾರೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT