ನವದೆಹಲಿ: ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದರ್ಪ ತೋರಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ 'ನಬನ್ನಾ ಅಭಿಯಾನ್' ಪ್ರತಿಭಟನೆ ನಡೆದಿದೆ. ಸರ್ಕಾರದ ಸಚಿವಾಲಯದ ಕಡೆ ನುಗ್ಗಲು ಪ್ರಯತ್ನಿಸಿದಾಗ ಕೋಲ್ಕತ್ತ ಹಾಗೂ ನೆರೆಯ ಹೌರಾದ ಹಲವೆಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಯಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್ ನಡೆಸಿದ್ದಾರೆ. ಅಶ್ರುವಾಯು ಹಾಗೂ ಜಲಫಿರಂಗಿಯನ್ನೂ ಬಳಸಲಾಗಿದೆ.
ಇದರ ಬೆನ್ನಲ್ಲೇ ನಡ್ಡಾ ಅವರು ಮಮತಾ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಕೋಲ್ಕತ್ತದಲ್ಲಿ ಪೊಲೀಸರು ತೋರಿರುವ ದರ್ಪವು ಪ್ರಜಾಸತ್ತಾತ್ಮಕ ತತ್ವಗಳನ್ನು ಗೌರವಿಸುವ ಪ್ರತಿಯೊಬ್ಬರನ್ನೂ ಕೆರಳಿಸಿದೆ. ದೀದಿಯ (ಮಮತಾ ಬ್ಯಾನರ್ಜಿ ಅವರ) ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರಿಗಳು ಮತ್ತು ಅಪರಾಧಿಗಳಿಗೆ ನೆರವಾಗಲು ಕಿಮ್ಮತ್ತು ನೀಡಲಾಗುತ್ತದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವುದೇ ಅಪರಾಧವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
The images of police highhandedness from Kolkata have angered every person who values democratic principles.
— Jagat Prakash Nadda (@JPNadda) August 27, 2024
In Didi's West Bengal, to help rapists and criminals is valued but it's a crime to speak for women's safety.
ಪೊಲೀಸರು ನ್ಯಾಯಕ್ಕಾಗಿ ಹೋರಾಡುವವರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಮಹಿಳೆಯ ಮೇಲೆ ಘೋರ ಅಪರಾಧ ನಡೆದಿರುವ ಹೊತ್ತಿನಲ್ಲಿ ಮಮತಾ ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಗಳನ್ನು ರಕ್ಷಿಸಲು ನಿರ್ದಯವಾಗಿ ವರ್ತಿಸಿರುವ ಮಮತಾ, ಸರ್ವಾಧಿಕಾರದ ಎಲ್ಲ ಮಿತಿಗಳನ್ನೂ ಮೀರಿದ್ದಾರೆ. ಹೌರಾ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಯುವ ಪ್ರತಿಭಟನಾಕಾರರನ್ನು ಎದುರಿಸಲು 6,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗುಡುಗಿದ್ದಾರೆ.
ಸಂದೇಶ್‌ಖಾಲಿ ಪ್ರಕರಣವನ್ನೂ ಉಲ್ಲೇಖಿಸಿರುವ ನಡ್ಡಾ, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಖಾತ್ರಿ ನೀಡಲು ಸಿಎಂ ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.
ಪೊಲೀಸರ ಕ್ರಮದ ವಿರುದ್ಧ ಬಿಜೆಪಿಯು ಇಂದು (ಬುಧವಾರ) ಪಶ್ಚಿಮ ಬಂಗಾಳ ಬಂದ್‌ಗೆ ಕರೆ ನೀಡಿರುವುದನ್ನು ಜನರು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವನ್ನೂ ನಡ್ಡಾ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.