ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಜೈಲಿಗೆ ಕಳಿಸಿ ಕೇಜ್ರಿವಾಲ್‌ ಆರೋಗ್ಯವನ್ನು ಅಪಾಯಕ್ಕೆ ದೂಡಿದ ಬಿಜೆಪಿ–ಆತಿಶಿ ಆರೋಪ

Published 3 ಏಪ್ರಿಲ್ 2024, 7:20 IST
Last Updated 3 ಏಪ್ರಿಲ್ 2024, 7:20 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21ರಂದು ಇ.ಡಿ ಬಂಧನಕ್ಕೆ ಒಳಗಾದಾಗಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ದೇಹತೂಕವು ವಿಪರೀತ ಕಡಿಮೆಯಾಗಿದೆ. ಅವರ ಆರೋಗ್ಯಕ್ಕೆ ಬಿಜೆಪಿ ಸಮಸ್ಯೆ ಒಡ್ಡುತ್ತಿದೆ ಎಂದು ಎಎಪಿ ನಾಯಕಿ ಆತಿಶಿ ಬುಧವಾರ ಆರೋಪಿಸಿದ್ದಾರೆ. 

ಮುಖ್ಯಮಂತ್ರಿಯ ಆರೋಗ್ಯದ ದೃಷ್ಟಿಯಿಂದ ಕಾನೂನಿನ ನೆರವು ಕೇಳುವುದಾಗಿಯೂ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.  

ಆದರೆ, ನ್ಯಾಯಾಂಗ ಬಂಧನಕ್ಕೆ ಒಳಗಾದಾಗಿನಿಂದ ಕೇಜ್ರಿವಾಲ್ ಅವರ ದೇಹತೂಕದಲ್ಲಿ ಬದಲಾವಣೆ ಆಗಿಲ್ಲ ಎಂದು ತಿಹಾರ್ ಜೈಲಿನ ಆಡಳಿತಾಧಿಕಾರಿ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. 

‘ಏಪ್ರಿಲ್ 1ರಂದು ಕೇಜ್ರಿವಾಲ್ ಬಂಧನಕ್ಕೆ ಒಳಗಾದ ನಂತರ ಇಬ್ಬರು ವೈದ್ಯರು ಅವರನ್ನು ತಪಾಸಣೆ ನಡೆಸಿದ್ದರು. ಆಗ ಅವರ ದೇಹಸ್ಥಿತಿ ಸಹಜವಾಗಿಯೇ ಇತ್ತು. ದೇಹತೂಕ ಆಗ 65 ಕೆ.ಜಿ. ಇತ್ತು. ಈಗಲೂ ತೂಕ ಇಳಿಕೆಯಾಗಿಲ್ಲ. ಕೋರ್ಟ್ ಆದೇಶದಂತೆ, ಮನೆಯಿಂದ ಸಿದ್ಧಪಡಿಸಿದ ಆಹಾರವನ್ನೇ ಅವರಿಗೆ ಪೂರೈಸಲಾಗುತ್ತಿದೆ. ಹೀಗಾಗಿ ಅವರ ದೇಹದ ಆರೋಗ್ಯದಲ್ಲಿ ಏರುಪೇರು ಆಗುವಂತಹದ್ದೇನೂ ಆಗಿಲ್ಲ’ ಎಂದು ಜೈಲಿನ ಹಿರಿಯ ಅಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 

ಜೈಲು ಅಧಿಕಾರಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಎಎಪಿ ಶಾಸಕ ದಿಲೀಪ್ ಪಾಂಡೆ, ‘ತಿಹಾರಿ ಜೈಲಿನಲ್ಲಿ ಅವರು ಕೆಲವು ದಿನಗಳಿಂದ ಇದ್ದಾರಷ್ಟೆ. ಆದರೆ, ಮಾರ್ಚ್ 21ರಂದು ಬಂಧನಕ್ಕೆ ಒಳಗಾದಾಗಿನಿಂದ ಇಲ್ಲಿಯವರೆಗೆ 4.5 ಕೆ.ಜಿ. ದೇಹತೂಕ ಕಡಿಮೆಯಾಗಿರುವುದನ್ನು ದಾಖಲೆಯೇ ಹೇಳುತ್ತದೆ. ಬಂಧನಕ್ಕೆ ಮೊದಲು ಅವರ ದೇಹತೂಕ 69.5 ಕೆ.ಜಿ. ಇತ್ತು. ಈಗ 65 ಕೆ.ಜಿಗೆ ಇಳಿದಿದೆ. ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. 

ಏಪ್ರಿಲ್ 7ಕ್ಕೆ ಉಪವಾಸ ಸತ್ಯಾಗ್ರಹ

ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಜಂತರ್‌ ಮಂತರ್‌ನಲ್ಲಿ ಏಪ್ರಿಲ್‌ 7ರಂದು ಎಎಪಿ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಕ್ಷದ ನಾಯಕ ಗೋಪಾಲ್‌ ರಾಯ್‌ ತಿಳಿಸಿದರು.

‘ನಿಮ್ಮ ಮನೆ ನೀವು ಇರುವ ಸ್ಥಳ ಎಲ್ಲಿಯೇ ಆಗಲಿ ಯಾರು ಬೇಕಾದರೂ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ನಮ್ಮ ಪ್ರತಿಭಟನೆಗೆ ಬೆಂಬಲ ಸೂಚಿಸಬಹುದು. ಏಪ್ರಿಲ್‌ 7ರಂದು ದೆಹಲಿ ಸರ್ಕಾರದ ಸಚಿವರು ಎಎಪಿ ಸಂಸದರು ಶಾಸಕರು ಮಹಾನಗರ ಪಾಲಿಕೆ ಸದಸ್ಯರು ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವರು.

ವಿದ್ಯಾರ್ಥಿ ಸಂಘಟನೆಗಳು ರೈತ ಸಂಘಟನೆಗಳು ಕಾರ್ಮಿಕ ಸಂಘಟನೆಗಳೂ ಪ್ರತಿಭಟನೆಯಲ್ಲಿ ಭಾಗವಹಿಸಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಕರೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT