ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ತೂಕದಲ್ಲಿ ವ್ಯತ್ಯಾಸವಾಗಿಲ್ಲ: AAP ಆರೋಪದ ಬಗ್ಗೆ ತಿಹಾರ್ ಅಧಿಕಾರಿಗಳು

Published 3 ಏಪ್ರಿಲ್ 2024, 9:35 IST
Last Updated 3 ಏಪ್ರಿಲ್ 2024, 9:35 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತೂಕದಲ್ಲಿ (65 ಕೆ.ಜಿ) ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಂಧನವಾದ ಬಳಿಕ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ದೇಹದ ತೂಕ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅವರನ್ನು ಜೈಲಿಗೆ ಹಾಕುವ ಮೂಲಕ ಬಿಜೆಪಿಯು ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಎಎಪಿ ಹಿರಿಯ ನಾಯಕಿ ಆತಿಶಿ ಆರೋಪಿಸಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ಅವರ ತೂಕದಲ್ಲಿ ವ್ಯತ್ಯಾಸವಾಗಿಲ್ಲ. ಜತೆಗೆ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಏಪ್ರಿಲ್ 1ರಂದು ಅರವಿಂದ ಕೇಜ್ರಿವಾಲ್ ತಿಹಾರ್ ಜೈಲಿಗೆ ಆಗಮಿಸಿದ ಕೂಡಲೇ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದರು. ಕೇಜ್ರಿವಾಲ್ ಅವರು ಜೈಲಿಗೆ ಬಂದಾಗಿನಿಂದ ಇಲ್ಲಿಯವರೆಗೆ ಅವರ ತೂಕವು 65 ಕೆ.ಜಿ.ಯಷ್ಟೇ ಇದೆ. ನ್ಯಾಯಾಲಯದ ಆದೇಶದಂತೆ ಮನೆ ಊಟವನ್ನೇ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೇಜ್ರಿವಾಲ್‌ ಅವರಿಗೆ ಗಂಭೀರವಾದ ಸಕ್ಕರೆ ಕಾಯಿಲೆಯಿದೆ. ಆರೋಗ್ಯ ಸಮಸ್ಯೆಗಳ ನಡುವೆಯೂ ದಿನದ 24 ಗಂಟೆ ದೇಶ ಸೇವೆಯಲ್ಲಿ ನಿರತರಾಗಿದ್ದರು. ಬಂಧನದ ನಂತರ ಕೇಜ್ರಿವಾಲ್ ಅವರ ತೂಕ 4.5 ಕೆಜಿ ಕಡಿಮೆಯಾಗಿದೆ. ಇದು ತುಂಬಾ ಆತಂಕಕಾರಿಯಾಗಿದೆ. ಅವರನ್ನು ಜೈಲಿಗೆ ಹಾಕುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಕೇಜ್ರಿವಾಲ್‌ ಅವರಿಗೆ ಏನಾದರೂ ಆದರೆ, ಇಡೀ ದೇಶ ಮಾತ್ರವಲ್ಲ ದೇವರೂ ಅವರನ್ನು (ಬಿಜೆಪಿ) ಕ್ಷಮಿಸುವುದಿಲ್ಲ’ ಎಂದು ಆತಿಶಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT