ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಎಷ್ಟೇ ದ್ವೇಷ ಹರಡಿದರೂ ಭಾರತೀಯರ DNAನಲ್ಲಿಯೇ ಪ್ರೀತಿ ತುಂಬಿದೆ– ರಾಹುಲ್

Published 11 ಫೆಬ್ರುವರಿ 2024, 11:18 IST
Last Updated 11 ಫೆಬ್ರುವರಿ 2024, 11:18 IST
ಅಕ್ಷರ ಗಾತ್ರ

ರಾಯಗಢ: ದೇಶದಲ್ಲಿ ಆರ್‌ಎಸ್‌ಎಸ್‌ – ಬಿಜೆಪಿ ದ್ವೇಷ ಹರಡುವ ಕೆಲಸದಲ್ಲಿ ತೊಡಗಿದ್ದು, ಎಷ್ಟೇ ದ್ವೇಷ ಹರಡಿದರೂ ಭಾರತೀಯರ ಡಿಎನ್‌ಎಯಲ್ಲಿಯೇ ಪ್ರೀತಿ ಇದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಎರಡು ದಿನದ ವಿರಾಮದ ನಂತರ ಛತ್ತೀಸಗಢದ ರಾಯಗಢದಿಂದ ಭಾರತ್‌ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ರಾಹುಲ್‌ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ‘ಸದ್ಯ ದೇಶದ ಮೂಲೆ ಮೂಲೆಗಳಲ್ಲಿ ಹಿಂಸೆ ಹರಡುತ್ತಿದೆ. ಭಾಷೆ, ಜನಾಂಗದ ಆಧಾರದಲ್ಲಿ ಹಿಂಸೆ ಹರಡಲಾಗುತ್ತಿದೆ. ಇಂತಹ ಚಿಂತನೆಗಳು ದೇಶವನ್ನು ದುರ್ಬಲಗೊಳಿಸುತ್ತವೆ’ ಎಂದರು.

‘ಈ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಭಿನ್ನ ಚಿಂತನೆಗಳನ್ನು, ನಂಬಿಕೆಗಳನ್ನು ಹೊಂದಿರುವವರು ಒಟ್ಟಾಗಿ ಬಾಳುತ್ತಿದ್ದಾರೆ’ ಎಂದು ಹೇಳಿದರು.

ಅಗ್ನಿಪಥ ಯೋಜನೆ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ. ‘ಎಲ್ಲಾ ರೀತಿಯ ರಕ್ಷಣಾ ಗುತ್ತಿಗೆಗಳನ್ನು ಅದಾನಿಗೆ ನೀಡಲಾಗುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಕ್ಕೆ ನನ್ನ ಸದಸ್ಯತ್ವವನ್ನೇ ರದ್ದುಗೊಳಿಸಲಾಯಿತು. ಅಲ್ಲದೇ ನನ್ನ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ಹೇಳಲಾಯಿತು. ಜನರ ಹೃದಯದಲ್ಲಿ ವಾಸಿಸುವ ನನಗೆ ಮನೆಯ ಅಗತ್ಯವಿಲ್ಲ’ ಎಂದರು.

ರ್‍ಯಾಲಿ ವೇಳೆ ತಮ್ಮ ಮೊಬೈಲ್ ತೋರಿಸಿದ ರಾಹುಲ್‌ ಗಾಂಧಿ, ‘ಇದು ಚೀನಾದಲ್ಲಿ ತಯಾರಾದ ವಸ್ತುವಾಗಿದೆ. ಅಂಬಾನಿಯಂತಹ ಉದ್ಯಮಿಗಳಿಂದ ಭಾರತದ ಮಾರುಕಟ್ಟೆಯಲ್ಲಿ ಈ ವಸ್ತುಗಳು ಮಾರಾಟವಾಗುತ್ತಿದೆ. ಇದರಿಂದ ಚೀನಾ ಮತ್ತು ಅಂಬಾನಿಯ ಜೇಬು ತುಂಬುತ್ತಿದೆ. ಈ ಮೊಬೈಲ್‌ಗಳು ಛತ್ತೀಸಗಢದಲ್ಲಿಯೇ ತಯಾರಾಗಬೇಕೆಂಬುದು ನನ್ನ ಕನಸಾಗಿದೆ’ ಎಂದರು.

‘ರೈತರ ಆತ್ಮಹತ್ಯೆ, ಕಾರ್ಮಿಕರ ಪ್ರತಿಭಟನೆಗಳನ್ನು ತೋರಿಸದ ಮಾಧ್ಯಮಗಳು, ಅಂಬಾನಿ–ಅದಾನಿ ಮಕ್ಕಳ ಮದುವೆ, ವಿಶ್ವಕಪ್‌ ಪಂದ್ಯಗಳಂತಹ ವಿಷಯಗಳನ್ನಷ್ಟೇ ಬಿತ್ತರಿಸುತ್ತವೆ. ಜನರಿಗೆ ಸತ್ಯ ದರ್ಶನ ಮಾಡಲು, ಜನರ ಜೊತೆ ಸಂಪರ್ಕ ಜೋಡಿಸುವುದಕ್ಕೋಸ್ಕರವೇ ನಾನು ಈ ಯಾತ್ರೆ ಆರಂಭಿಸಬೇಕಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT