ನವದೆಹಲಿ: ಬುಡಕಟ್ಟು ಜನರ ನಡುವಿನ ಘರ್ಷಣೆಯಿಂದ ನಲುಗಿರುವ ಮಣಿಪುರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿರುವುದು ಅವರ ಬೇಜವಾಬ್ದಾರಿ ವರ್ತನೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಗುರುವಾರ ಕಿಡಿಕಾರಿದೆ.
‘ಕಾಂಗ್ರೆಸ್ ನಾಯಕನ (ರಾಹುಲ್ ಗಾಂಧಿ) ಹಠಮಾರಿ ಧೋರಣೆ ಪರಿಣಾಮವಾಗಿ ಮಣಿಪುರದಲ್ಲಿ ಇಂದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ (ಮಣಿಪುರ ಉಸ್ತುವಾರಿ) ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ಕಳೆದ ಎರಡು–ಮೂರು ದಿನಗಳಿಂದ ಹಲವು ನಾಗರಿಕ ಸಂಘಟನೆಗಳು ವಿದ್ಯಾರ್ಥಿಗಳು ಸಂಘಗಳು ಪ್ರತಿಭಟನೆ ನಡೆಸುತ್ತಿವೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ ರಾಹುಲ್ ಅವರು ಭೇಟಿ ಮಣಿಪುರಕ್ಕೆ ಭೇಟಿ ನೀಡಿದ್ದು ನೋವಿನ ಸಂಗತಿ. ಹಠಮಾರಿತನಕ್ಕಿಂತ ಸಂವೇದನಾಶೀಲತೆ ಮುಖ್ಯ. ರಾಹುಲ್ ಹಾಗೂ ಜವಾಬ್ದಾರಿತನ ಒಟ್ಟಿಗೆ ಸಾಗುವುದಿಲ್ಲ ಎಂಬುದು ಇಂದು ಮತ್ತೆ ಸಾಬೀತಾಗಿದೆ’ ಎಂದರು.