ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಮತಾಗೆ ಗಾಯ: ತಳ್ಳಿದ್ದರಿಂದ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದ ವೈದ್ಯರು

Published 15 ಮಾರ್ಚ್ 2024, 15:35 IST
Last Updated 15 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ನಿವಾಸದಲ್ಲಿ ಬಿದ್ದು, ಗಾಯಗೊಳ್ಳಲು ಅವರನ್ನು ಹಿಂದಿನಿಂದ ತಳ್ಳಿದ್ದೇ ಕಾರಣ‘ ಎನ್ನಲಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಶುಕ್ರವಾರ ಆಗ್ರಹಿಸಿದೆ.

ಬಿಜೆಪಿಯ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಪಕ್ಷ ಟಿಎಂಸಿ, ಬಿಜೆಪಿಯು ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದೆ.

69 ವರ್ಷದ ಮಮತಾ ಬ್ಯಾನರ್ಜಿ ಅವರು ದಕ್ಷಿಣ ಕೋಲ್ಕತ್ತದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬಿದ್ದಿದ್ದರು. ಹಣೆ ಮತ್ತು ಮೂಗಿಗೆ ಪೆಟ್ಟಾಗಿದ್ದರಿಂದ ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಳ್ಳಿರಬಹುದು’ ಎಂದು ಆಸ್ಪತ್ರೆಯ ನಿರ್ದೇಶಕ ಮಣಿಮೋಯ್ ಬಂದೋಪಾಧ್ಯಾಯ ಗುರುವಾರ ಹೇಳಿದ್ದರು. ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರು. ಇದು ಭಾರಿ ಗೊಂದಲ ಹಾಗೂ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಮಗ್ರ ತನಿಖೆಗೆ ಆಗ್ರಹಿಸಿದೆ.

‘ಮುಖ್ಯಮಂತ್ರಿಗಳನ್ನು ಹಿಂದಿನಿಂದ ನೂಕಲಾಗಿದೆ ಎಂದು ಎಸ್‌ಎಸ್‌ಕೆಎಂ ಆಸ್ಪತ್ರೆ ನಿರ್ದೇಶಕರು ಗುರುವಾರ ರಾತ್ರಿ ಹೇಳಿದ್ದರು. ಇಂದು ಬೆಳಿಗ್ಗೆ ತಮ್ಮ ಮಾತನ್ನು ಬದಲಾಯಿಸಿರುವ ಅವರು, ಬೇರೆಯೇ ಕಾರಣ ಹೇಳುತ್ತಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬೀಳಲು ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸಬೇಕು. ಈ ಘಟನೆ ಬಗ್ಗೆ ತಿಳಿದುಕೊಳ್ಳುವುದು ಪಶ್ಚಿಮ ಬಂಗಾಳದ ಪ್ರತಿಯೊಬ್ಬ ಪ್ರಜೆಯ ಹಕ್ಕು’ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಸಂಸದ ದಿಲೀಪ್‌ ಘೋಷ್‌ ಹೇಳಿದ್ದಾರೆ.

‘ಈ ವಿಷಯವನ್ನು ರಾಜಕೀಯಗೊಳಿಸುವುದು ಸರಿಯಲ್ಲ’ ಎಂದು ಟಿಎಂಸಿ ನಾಯಕಿ ಹಾಗೂ ಸಚಿವೆ ಶಶಿ ಪಾಂಜಾ ಹೇಳಿದ್ದಾರೆ.

‘ನಿಮಗೆ ಆರೋಗ್ಯ ಸರಿ ಇಲ್ಲದಿರುವಾಗ, ಬೀಳುವ ಸಾಧ್ಯತೆ ಇರುತ್ತದೆ. ಈ ರೀತಿ ಆದಾಗ, ಹಿಂದಿನಿಂದ ನಿಮ್ಮನ್ನು ಯಾರೋ ತಳ್ಳಿದ್ದರು ಎಂದು ಅನಿಸುತ್ತದೆ. ಈ ಬಗ್ಗೆ ವೈದ್ಯರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರಲ್ಲದೇ, ಹಣೆಯಲ್ಲಿ ರಕ್ತಸ್ರಾವದಿಂದ ಮುಖ್ಯಮಂತ್ರಿಗಳು ಬಳಲಿದ್ದನ್ನು ತೋರಿಸುವ ಚಿತ್ರಗಳನ್ನು ಸಹ ನಾವೆಲ್ಲ ನೋಡಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT