ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಲೀಗ್ ಬೆಂಬಲಿಸಿದ್ದ BJP ಪೂರ್ವಜರು: ಖರ್ಗೆ

Published 8 ಏಪ್ರಿಲ್ 2024, 14:46 IST
Last Updated 8 ಏಪ್ರಿಲ್ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ಮೋದಿ–ಶಾ ಅವರ ರಾಜಕೀಯ ಹಾಗೂ ‘ತಾತ್ವಿಕ ಪೂರ್ವಜರು’ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತಕ್ಕೆ ಬದಲಾಗಿ ಬ್ರಿಟಿಷರನ್ನು ಮತ್ತು ಮುಸ್ಲಿಂ ಲೀಗ್ ಅನ್ನು ಬೆಂಬಲಿಸಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. 

‘ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರತಿರೂಪದಂತಿದೆ’ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತುಷ್ಟೀಕರಣ ಮಾಡಿದೆ ಎಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷವು ಏಕೆ ಬಹುಸಂಖ್ಯಾತರ ವಿರುದ್ಧವಿದೆ ಎನ್ನುವುದಕ್ಕೆ ಉತ್ತರಿಸಬೇಕೆಂದು ಕೇಳಿದ್ದರು. 

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ದೇಶದ ಸಾಮಾನ್ಯ ಜನರ ಬೇಡಿಕೆ, ಅಗತ್ಯ, ಆಶೋತ್ತರಗಳಿಂದ ಪ್ರೇರಿತವಾದ ಕಾಂಗ್ರೆಸ್‌ನ ‘ನ್ಯಾಯ ಪತ್ರ’ಕ್ಕೆ ವಿರುದ್ಧವಾಗಿ ಇಂದು ಕೂಡ ಬಿಜೆಪಿ, ಮುಸ್ಲಿಂ ಲೀಗ್ಅನ್ನು ಆವಾಹಿಸಿಕೊಂಡಿದೆ’ ಎಂದು ಟೀಕಿಸಿದರು.

‘1942ರಲ್ಲಿ ಮೌಲಾನಾ ಆಜಾದ್ ಅವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ಅವರು ‘ಕ್ವಿಟ್ ಇಂಡಿಯಾ’ಗೆ ಕರೆ ನೀಡಿದಾಗ ಅದನ್ನು ‘ಮೋದಿ–ಶಾ ಅವರ ‘ತಾತ್ವಿಕ ಪೂರ್ವಜರು’ ವಿರೋಧಿಸಿದ್ದರು’ ಎಂದು ಕುಟುಕಿದರು.

‘1940ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಬಂಗಾಳ, ಸಿಂಧ್ ಮತ್ತು ವಾಯವ್ಯ ಗಡಿಯಲ್ಲಿ (ನಾರ್ತ್ ವೆಸ್ಟ್ ಫ್ರಾಂಟಿಯರ್) ಮುಸ್ಲಿಂ ಲೀಗ್ ಜತೆ ಮೈತ್ರಿ ಮಾಡಿಕೊಂಡು ತಮ್ಮ ಸರ್ಕಾರಗಳನ್ನು ರಚಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಖರ್ಗೆ ಹೇಳಿದರು.

‘1942ರ ಕ್ವಿಟ್ ಇಂಡಿಯಾ ಚಳವಳಿಯನ್ನು ಹೇಗೆ ಎದುರಿಸಬೇಕು, ಕಾಂಗ್ರೆಸ್ ಅನ್ನು ಹೇಗೆ ದಮನ ಮಾಡಬೇಕು ಎಂದು ಶ್ಯಾಮ ಪ್ರಸಾದ್ ಮುಖರ್ಜಿ ಆಗಿನ ಬ್ರಿಟಿಷ್ ಗವರ್ನರ್‌ಗೆ ಬರೆದಿರಲಿಲ್ಲವೇ, ಅದಕ್ಕಾಗಿ ಭಾರತೀಯರು ಬ್ರಿಟಿಷರನ್ನು ನಂಬಬೇಕು ಎಂದು ಅವರು ಹೇಳಿರಲಿಲ್ಲವೇ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

‘ಮೋದಿ–ಶಾ ಮತ್ತು ಅವರಿಂದ ನೇಮಕವಾಗಿರುವ ಅಧ್ಯಕ್ಷರು ಇಂದು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮೋದಿಜೀ ಅವರ ಭಾಷಣಗಳು ಆರ್‌ಎಸ್‌ಎಸ್‌ನ ದುರ್ನಾತ ಬೀರುತ್ತಿವೆ. ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಸಾಧ್ಯತೆಗಳು ದಿನೇ ದಿನೇ ಕ್ಷೀಣಿಸುತ್ತಿದೆ. ಹೀಗಾಗಿ ಆರ್‌ಎಸ್‌ಎಸ್ ಅದರ ಅತ್ಯುತ್ತಮ ಸ್ನೇಹಿತನಾಗಿರುವ ಮುಸ್ಲಿಂ ಲೀಗ್ ಅನ್ನು ಸ್ಮರಿಸುತ್ತಿದೆ’ ಎಂದು ಖರ್ಗೆ ವ್ಯಂಗ್ಯವಾಡಿದರು.        

‘ಬಿಜೆಪಿ ಜನಪ್ರಿಯತೆ ಕುಸಿಯುತ್ತಿರುವುದರ ಫಲ’

‘ಬಿಜೆಪಿಯ ಜನಪ್ರಿಯತೆ ಸತತವಾಗಿ ಕುಸಿಯುತ್ತಿದ್ದು ಅದರಿಂದಾಗಿಯೇ ಪ್ರಧಾನಿ ಅವರಿಗೆ ಮುಸ್ಲಿಂ ಲೀಗ್ ಬಗ್ಗೆ ಪ್ರೀತಿ ಮರುಕಳಿಸಿದೆ’ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ. ಇಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದಿದ್ದ ಅವರು ‘10 ವರ್ಷ ಅಧಿಕಾರ ಅನುಭವಿಸಿದ ನಂತರ ಚುನಾವಣೆಯ ಸಮಯದಲ್ಲಿ ತಮ್ಮ ಸಾಧನೆಗಳನ್ನು ತೋರಿಸಿ ಮತ ಯಾಚನೆ ಮಾಡಬೇಕಾದಾಗ ಪ್ರಧಾನಿ ಭಯಗೊಂಡಿದ್ದಾರೆ. ಹೀಗಾಗಿಯೇ ಅವರು ಸವಕಲು ಹಿಂದು–ಮುಸ್ಲಿಂ ಕಥೆಯ ಮೊರೆ ಹೋಗಿದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT