ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಆಯ್ಕೆ

Published 11 ಡಿಸೆಂಬರ್ 2023, 11:32 IST
Last Updated 11 ಡಿಸೆಂಬರ್ 2023, 11:32 IST
ಅಕ್ಷರ ಗಾತ್ರ

ಭೋಪಾಲ್: ಅಚ್ಚರಿಯ ನಡೆಯಲ್ಲಿ, ಮಧ್ಯಪ್ರದೇಶ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಒಬಿಸಿ ನಾಯಕ ಹಾಗೂ ಉಜ್ಜೈನಿ ಶಾಸಕ ಮೋಹನ್‌ ಯಾದವ್‌ ಅವರನ್ನು ಬಿಜೆಪಿ ಸೋಮವಾರ ಆಯ್ಕೆ ಮಾಡಿದೆ.

ಇಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು, 58 ವರ್ಷದ ಮೋಹನ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿತು.  

ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಸಂಪುಟದಲ್ಲಿ ಯಾದವ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಅವರು ಉಜ್ಜೈನಿ ದಕ್ಷಿಣ ಕ್ಷೇತ್ರವನ್ನು ಮೂರನೇ ಬಾರಿ ಪ್ರತಿನಿಧಿಸುತ್ತಿದ್ದಾರೆ.

‘ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್ ಅವರು ಯಾದವ್‌ ಹೆಸರನ್ನು ಸೂಚಿಸಿದರು. ಪಕ್ಷ ನೇಮಿಸಿದ್ದ ವೀಕ್ಷಕರು ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸ್ಪರ್ಧೆಯಲ್ಲಿ ಮೋಹನ್‌ ಯಾದವ್‌ ಇರಲಿಲ್ಲ. ಆದರೆ, ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಬಹಳ ಹತ್ತಿರ. ಜೊತೆಗೆ, ಇತರ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರೂ ಆಗಿದ್ದಾರೆ.

ಮೋಹನ್‌ ಯಾದವ್‌ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಬಿಜೆಪಿಯು ನಾಲ್ಕನೇ ಬಾರಿ ಒಬಿಸಿ ನಾಯಕರನ್ನು ತನ್ನ ವಿಶ್ವಾಸ ಇರಿಸಿದಂತಾಗಿದೆ.

2003ರಲ್ಲಿ ಉಮಾ ಭಾರತಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದ ಬಿಜೆಪಿ, ನಂತರ ಬಾಬುಲಾಲ್‌ ಗೌರ್‌ ಹಾಗೂ ಚೌಹಾಣ್‌ ಅವರಿಗೆ ಮಣೆ ಹಾಕಿತ್ತು.

ಹಕ್ಕು ಮಂಡನೆ:  ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಗಿದ ನಂತರ, ನಿಯೋಜಿತ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ರಾಜಭವನಕ್ಕೆ ತೆರಳಿದರು.

ರಾಜ್ಯಪಾಲರಾದ ಮಂಗೂಭಾಯ್ ಪಟೇಲ್‌ ಅವರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ, ಕೇಂದ್ರದ ವೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜೀನಾಮೆ: ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಪಕ್ಷವು ಮೋಹನ್‌ ಯಾದವ್‌ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ, ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಜ್ಯಪಾಲರಾದ ಮಂಗೂಭಾಯ್‌ ಪಟೇಲ್‌ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ತೋಮರ್‌ಗೆ ಸ್ಪೀಕರ್‌ ಸ್ಥಾನ; ಇಬ್ಬರು ಡಿಸಿಎಂ

‘ಬಿಜೆಪಿಯು ಮಧ್ಯಪ್ರದೇಶ ವಿಧಾನಸಭೆ ನೂತನ ಸ್ಪೀಕರ್‌ ಸ್ಥಾನಕ್ಕೆ ಹಿರಿಯ ನಾಯಕ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಆಯ್ಕೆ ಮಾಡಿದೆ’ ಎಂದು ಪಕ್ಷದ ಮುಖಂಡ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ‘ರಾಜ್ಯವು ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಲಿದೆ. ರಾಜೇಂದ್ರ ಶುಕ್ಲಾ ಹಾಗೂ ಜಗದೀಶ್‌ ದೇವ್ಡಾ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜನರ ನಿರೀಕ್ಷೆ ಪೂರೈಸಲು ಶ್ರಮ: ಯಾದವ್

‘ರಾಜ್ಯದ ಜನರು ಅಪಾರ ನಿರೀಕ್ಷೆ ಹೊಂದಿದ್ದಾರೆ. ಅವರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವೆ’ ಎಂದು ನಿಯೋಜಿತ ಮುಖ್ಯಮಂತ್ರಿ ಮೋಹನ್‌ ಯಾದವ್‌ ಸೋಮವಾರ ಹೇಳಿದರು.

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನರು ಭಾರಿ ಬಹುಮತದೊಂದಿಗೆ ಬಿಜೆಪಿ ಗೆಲ್ಲಿಸಿದ್ದಾರೆ. ಈಗ ಪಕ್ಷವು ಸಾಮಾನ್ಯ ಕಾರ್ಯಕರ್ತನಿಗೆ ದೊಡ್ಡ ಜವಾಬ್ದಾರಿ ನೀಡಿದೆ. ಹೀಗಾಗಿ ಜನರು ಹಾಗೂ ಪಕ್ಷದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ’ ಎಂದರು.

ಮಹಾಕಾಲೇಶ್ವರನ ಆಶೀರ್ವಾದ’

ನಿಯೋಜಿತ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ತವರು ಮಹಾಕಾಲೇಶ್ವರನ ಸನ್ನಿಧಾನ ಉಜ್ಜೈನಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಅವರ ನಿವಾಸದ ಮುಂದೆ ಬೆಂಬಲಿಗರು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಜಯ ಘೋಷಗಳನ್ನು ಕೂಗುತ್ತಿದ್ದರು. ‘ಮಹಾಕಾಲೇಶ್ವರನ ಆಶೀರ್ವಾದದಿಂದ ಪತಿಗೆ ಈ ದೊಡ್ಡ ಜವಾಬ್ದಾರಿ ಸಿಕ್ಕಿದೆ. ತನಗೆ ವಹಿಸಿದ ಯಾವುದೇ ಕೆಲಸವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ’ ಎಂದು ಮೋಹನ್‌ ಯಾದವ್ ಪತ್ನಿ ಸೀಮಾ ಯಾದವ್‌ ಪ್ರತಿಕ್ರಿಯಿಸಿದ್ದಾರೆ.

‘ಪಕ್ಷದ ಈ ನಿರ್ಧಾರದ ಬಗ್ಗೆ ಪ್ರತಿಯೊಬ್ಬರಿಗೂ ಸಂತಸವಾಗಿದೆ. ಮಹಾಕಾಲೇಶ್ವರ ದೇವರ ಆಶೀರ್ವಾದದಿಂದ ಅವರು ಉಜ್ಜೈನಿಯಂತೆಯೇ ರಾಜ್ಯದ ಅಭಿವೃದ್ಧಿ ಮಾಡುವರು’ ಎಂದು ಪುತ್ರ ವೈಭವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT