ಮುಂಬೈ: ಬಾಲಿವುಡ್ ನಟ ಗೋವಿಂದ ಅವರು ರಾಜಕೀಯ ‘ಪುನರಾಗಮನ’ ಮಾಡಿದ್ದು, ಗುರುವಾರ ಶಿವಸೇನಾ ಸೇರಿದರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಸಮ್ಮುಖದಲ್ಲಿ ಅವರು ಪಕ್ಷವನ್ನು ಸೇರಿಕೊಂಡರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ 60 ವರ್ಷದ ಗೋವಿಂದ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಗೋವಿಂದ ಅವರು 2004 ರಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಬಿಜೆಪಿಯ ರಾಮ ನಾಯ್ಕ್ ಅವರನ್ನು ಮಣಿಸಿದ್ದರು. 2009ರ ಬಳಿಕ ಅವರು ರಾಜಕೀಯದಿಂದ ದೂರವುಳಿದಿದ್ದರು.
‘ಮತ್ತೆ ರಾಜಕೀಯಕ್ಕೆ ಬರುತ್ತೇನೆ ಎಂದು ಯೋಚಿಸಿಯೇ ಇರಲಿಲ್ಲ. 14 ವರ್ಷಗಳ ವನವಾಸದ ಬಳಿಕ ಇದೀಗ ರಾಜಕೀಯ ಪುನರಾಗಮನ ಮಾಡಿದ್ದೇನೆ’ ಎಂದು ಗೋವಿಂದ ಹೇಳಿದರು.
ಗೋವಿಂದ ಅವರು ಪಕ್ಷವನ್ನು ಸೇರಿರುವುದಕ್ಕೂ, ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ ಎಂದು ಶಿಂದೆ ಹೇಳಿದರು. ಮುಂಬೈ ಉತ್ತರ ಕ್ಷೇತ್ರದಿಂದ ಗೋವಿಂದ ಅವರನ್ನು ಕಣಕ್ಕಿಳಿಸಲಾಗುವುದೇ ಎಂಬ ಪ್ರಶ್ನೆಗೆ, ‘ಚುನಾವಣೆಗೆ ಟಿಕೆಟ್ ಪಡೆಯಬೇಕೆಂಬ ಉದ್ದೇಶದೊಂದಿಗೆ ಅವರು ಪಕ್ಷವನ್ನು ಸೇರಿಲ್ಲ’ ಎಂದು ಉತ್ತರಿಸಿದರು.
‘ಗೋವಿಂದ ಅವರು ಅಭಿವೃದ್ಧಿಯ ಪರ ನಿಂತಿದ್ದಾರೆ. ಪ್ರಧಾನಿ ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ. ಸಿನಿಮಾ ಕ್ಷೇತ್ರದ ಪ್ರಗತಿಗೆ ಏನಾದರೂ ಕೊಡುಗೆ ನೀಡಬೇಕೆಂಬುದು ಅವರ ಬಯಕೆ. ಅವರು ಸರ್ಕಾರ ಮತ್ತು ಚಿತ್ರರಂಗದ ನಡುವೆ ಕೊಂಡಿಯಾಗಿರುತ್ತಾರೆ. ಯಾವುದೇ ಷರತ್ತು ಇಲ್ಲದೆಯೇ ನಮ್ಮ ಪಕ್ಷ ಸೇರಿದ್ದಾರೆ’ ಎಂದರು.
#WATCH | On joining Shiv Sena, Veteran Bollywood actor Govinda says, "I was in politics from 2004 to 2009 and that was the 14th Lok Sabha. This is an amazing coincidence that now, after 14 years, today I have come into politics again..." pic.twitter.com/Qnil9ov8zV
— ANI (@ANI) March 28, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.