ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖನಿಜ ಸಂಪತ್ತು ಇರುವ ಜಮೀನುಗಳ ರಾಯಧನ, ಬಾಕಿ ತೆರಿಗೆ: 2005ರಿಂದಲೇ ಪೂರ್ವಾನ್ವಯ

Published : 14 ಆಗಸ್ಟ್ 2024, 14:34 IST
Last Updated : 14 ಆಗಸ್ಟ್ 2024, 14:34 IST
ಫಾಲೋ ಮಾಡಿ
Comments

ನವದೆಹಲಿ: ಗಣಿಗಾರಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ರಾಜ್ಯಗಳಿಗೆ ಭಾರಿ ಮೊತ್ತದ ವರಮಾನ ದೊರೆಯಲಿದೆ. ಇಂತಹ ರಾಜ್ಯಗಳು ಗಣಿಗಾರಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ಜಮೀನುಗಳಿಗೆ ಸಂಬಂಧಿಸಿದ ಬಾಕಿ ಇರುವ ತೆರಿಗೆ ಮತ್ತು ರಾಯಧನವನ್ನು ಕೇಂದ್ರ ಸರ್ಕಾರ ಮತ್ತು ಗುತ್ತಿಗೆದಾರರಿಂದ 2005ರ ಏಪ್ರಿಲ್‌ 1ರಿಂದ ಪೂರ್ವಾನ್ವಯ ಆಗುವಂತೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಆದೇಶಿಸಿದೆ. 

ಬಾಕಿ ಮೊತ್ತದ ವಸೂಲಿಯನ್ನು 2026ರ ಏಪ್ರಿಲ್‌ 1ರಿಂದ ಆರಂಭಿಸಬಹುದು. ಅದರ ನಂತರದ 12 ವರ್ಷಗಳಲ್ಲಿ ಕಂತುಗಳ ರೂಪದಲ್ಲಿ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. 

ಆದರೆ, ಬಾಕಿ ತೆರಿಗೆ/ರಾಯಧನದ ಮೇಲೆ ದಂಡ ಅಥವಾ ಬಡ್ಡಿ ವಿಧಿಸುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳು ಶಾಸನಬದ್ಧ ಅಧಿಕಾರ ಹೊಂದಿವೆ ಎಂದು ಜುಲೈ 25ರಂದು, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ 9 ನ್ಯಾಯಮೂರ್ತಿಗಳು ಇದ್ದ ಸಂವಿಧಾನ ಪೀಠ 8:1 ಬಹುಮತದ ತೀರ್ಪು ನೀಡಿತ್ತು. 

ಆದರೆ, ಬಾಕಿ ತೆರಿಗೆ ಮತ್ತು ರಾಯಧನಕ್ಕೆ ಸಂಬಂಧಿಸಿದ ತನ್ನ ಆದೇಶವನ್ನು ಯಾವ ದಿನದಿಂದ ಅನ್ವಯಿಸಬೇಕು ಎಂಬ ಕುರಿತು ಪೀಠವು ಜುಲೈ 31ರಂದು ವಿಚಾರಣೆ ನಡೆಸಿತ್ತು. ಆದೇಶವನ್ನು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟ್‌ನ ಈ ತೀರ್ಪು, ಹೇರಳ ಖನಿಜ ಸಂಪತ್ತು ಹೊಂದಿರುವ ರಾಜ್ಯಗಳ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.

ಪೀಠದ ಪರವಾಗಿ ಆದೇಶ ಓದಿದ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌, ‘ಈ ವಿಷಯ ಕುರಿತ ತೀರ್ಪಿಗೆ ಪೀಠದಲ್ಲಿರುವ 8 ನ್ಯಾಯಮೂರ್ತಿಗಳು ಸಹಿ ಹಾಕುವರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಜುಲೈ 25ರಂದು ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಹಾಗಾಗಿ, ಅವರು ಸಹಿ ಹಾಕುವುದಿಲ್ಲ’ ಎಂದರು.

ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್, ಅಭಯ್‌ ಎಸ್.ಓಕಾ, ಜೆ.ಬಿ.ಪಾರ್ದೀವಾಲಾ, ಮನೋಜ್‌ ಮಿಶ್ರಾ, ಉಜ್ಜಲ್‌ ಭುಯಾಂ, ಸತೀಶ್ಚಂದ್ರ ಶರ್ಮ ಹಾಗೂ ಅಗಸ್ಟಿನ್ ಜಾರ್ಜ್ ಮಸೀಹ್ ಅವರು ಪೀಠದಲ್ಲಿದ್ದರು.

ಕೇಂದ್ರದಿಂದ ವಿರೋಧ: ಜುಲೈ 31ರಂದು ನಡೆದಿದ್ದ ವಿಚಾರಣೆ ವೇಳೆ, ಗಣಿಗಾರಿಕೆ ಮತ್ತು ಖನಿಜಗಳಿಗೆ ಸಂಬಂಧಿಸಿ 1989ರಿಂದ ವಿಧಿಸಿದ್ದ ರಾಯಧನವನ್ನು ಮರುಪಾವತಿ ಮಾಡಬೇಕು ಎಂಬ ರಾಜ್ಯಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ವಿರೋಧಿಸಿತ್ತು.

ರಾಜ್ಯಗಳ ಬೇಡಿಕೆಯು ನಾಗರಿಕರ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕ ಉದ್ದಿಮೆಗಳ ಬೊಕ್ಕಸಕ್ಕೆ ₹70 ಸಾವಿರ ಕೋಟಿಯಷ್ಟು ಹೊರೆ ಬೀಳಲಿದೆ ಎಂಬ ಅಂದಾಜಿದೆ ಎಂದು ಕೇಂದ್ರ ಹೇಳಿತ್ತು. ಹಾಗಾಗಿ, ಬಾಕಿ ಪಾವತಿ ಕುರಿತ ಆದೇಶವನ್ನು ಮುಂಬರುವ ವರ್ಷಗಳಿಂದ ಅನ್ವಯಿಸಬೇಕು. ಪೂರ್ವಾನ್ವಯು ಮಾಡಬಾರದು ಎಂದು ಕೋರಿತ್ತು.

ಕೇಂದ್ರದ ಈ ಮನವಿಯನ್ನು ಪೀಠ ತಿರಸ್ಕರಿಸಿತ್ತು. ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಸೇರಿದಂತೆ ಗಣಿಗಾರಿಕೆ ಕಂಪನಿಗಳು ರಾಜ್ಯಗಳಿಗೆ ಬಾಕಿ ಪಾವತಿಸುವುದಕ್ಕೆ ಸಂಬಂಧಿಸಿ ಕೆಲ ನಿಬಂಧನೆಗಳನ್ನು ರೂಪಿಸಿದೆ.

2005ರ ಏಪ್ರಿಲ್‌ 1ಕ್ಕೂ ಮೊದಲಿನ ವ್ಯವಹಾರಗಳಿಗೆ ಸಂಬಂಧಿಸಿ, ತೆರಿಗೆ ಮತ್ತು ರಾಯಧನ ಮರುಪಾವತಿಗೆ ರಾಜ್ಯಗಳು ಬೇಡಿಕೆ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ, ‘ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ತೀರ್ಪಿಗೂ ಮುನ್ನ ಸಂಗ್ರಹಿಸಲಾಗಿರುವ ತೆರಿಗೆಯನ್ನು ಪಡೆಯಲು ಕೆಲ ರಾಜ್ಯಗಳು ಬಯಸುತ್ತಿಲ್ಲ’ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘2024ರ ಜುಲೈ 25ಕ್ಕೂ ಹಿಂದಿನ ಅವಧಿಯ ಬಾಕಿಯನ್ನು ಪಡೆಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಆಯಾ ರಾಜ್ಯಗಳಿಗೆ ಸೇರಿದ ವಿಚಾರ’ ಎಂದಿತು.

ಪ್ರಮುಖ ಅಂಶಗಳು

  • ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳ ಮೇಲೆ ಕೇಂದ್ರ ಸರ್ಕಾರ ಮಾತ್ರ ರಾಯಧನ ಮತ್ತು ತೆರಿಗೆ ವಿಧಿಸುವ ಅಧಿಕಾರ ಹೊಂದಿದೆ ಎಂದು 1989ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು

  • 1989ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ 9 ನ್ಯಾಯಮೂರ್ತಿಗಳು ಇದ್ದ ಸಂವಿಧಾನ ಪೀಠ ಜುಲೈ 25ರಂದು ತೀರ್ಪು ನೀಡಿತ್ತು

  • ತೆರಿಗೆ ಮತ್ತು ರಾಯಧನ ಬೇರೆಬೇರೆ ಎಂದು ಜುಲೈ 25ರಂದು ನೀಡಿದ್ದ ತೀರ್ಪಿನಲ್ಲಿ ಪೀಠ ಸ್ಪಷ್ಟಪಡಿಸಿತ್ತು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಂದ ಭಿನ್ನ ನಿಲುವು ವ್ಯಕ್ತವಾಗಿತ್ತು

  • ಈ ಮೊದಲು, ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದ 1989ರಿಂದ ಅನ್ವಯಿಸುವಂತೆ ಕೇಂದ್ರ ಸರ್ಕಾರ ತೆರಿಗೆ ಹಾಗೂ ರಾಯಧನ ಪಾವತಿಸುವಂತೆ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯ ಸರ್ಕಾರಗಳು ಬೇಡಿಕೆ ಮಂಡಿಸಿದ್ದವು

ತೆರಿಗೆ ಆಕರಣೆ: ‘ಸುಪ್ರೀಂ’ ಹೇಳಿದ್ದೇನು

ಸಂವಿಧಾನದ 7ನೇ ‍ಪರಿಚ್ಛೇದದ ಪಟ್ಟಿ–2ರ ಟಿಪ್ಪಣಿ–49 ಹಾಗೂ ಟಿಪ್ಪಣಿ–50ಕ್ಕೆ ಸಂಬಂಧಿಸಿ ರಾಜ್ಯಗಳು ತೆರಿಗೆ ವಿಧಿಸಬಹುದು ಇಲ್ಲವೇ ತೆರಿಗೆ ಬೇಡಿಕೆಯನ್ನು ನವೀಕರಿಸಬಹುದು. ಈ ಪರಿಷ್ಕರಣೆ/ಆಕರಣೆಯು ‘ಖನಿಜ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ’ (ಎಂಎಡಿಎ) ಕುರಿತು ಜುಲೈ 25ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಅನುಗುಣವಾಗಿರಬೇಕು. ಟಿಪ್ಪಣಿ–49 ಖನಿಜಗಳಿರುವ ಜಮೀನುಗಳು ಹಾಗೂ ಕಟ್ಟಡಗಳ ಮೇಲಿನ ತೆರಿಗೆಗಳ ಕುರಿತು ವಿವರಿಸುತ್ತದೆ ಟಿಪ್ಪಣಿ–50 ಖನಿಜಗಳ ಮೇಲಿನ ಹಕ್ಕುಗಳಿಗೆ ಸಂಬಂಧಿಸಿದ ತೆರಿಗೆ ಕುರಿತು ವಿವರಿಸುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT