ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಚಂದ್ರಯಾನ–4’ಕ್ಕೆ ಸಚಿವ ಸಂಪುಟ ಅನುಮೋದನೆ: ಶುಕ್ರ ಗ್ರಹ ಅಧ್ಯಯನಕ್ಕೂ ಅಸ್ತು

Published : 18 ಸೆಪ್ಟೆಂಬರ್ 2024, 20:03 IST
Last Updated : 18 ಸೆಪ್ಟೆಂಬರ್ 2024, 20:03 IST
ಫಾಲೋ ಮಾಡಿ
Comments

ನವದೆಹಲಿ: ಚಂದ್ರನಲ್ಲಿಗೆ ಭಾರತೀಯ ಗಗನಯಾನಿಗಳನ್ನು ಕಳಿಸುವುದು, ಶುಕ್ರ ಗ್ರಹ ಅಧ್ಯಯನ ಹಾಗೂ ಅನಿಮೇಷನ್‌ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಭಾರತೀಯ ಗಗನಯಾನಿಗಳು ಚಂದಿರ ಅಂಗಳದಲ್ಲಿ ಇಳಿದು, ಪುನಃ ಭೂಮಿಗೆ ಮರಳಲು ಅಗತ್ಯವಿರುವ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಪ್ರಾತ್ಯಕ್ಷಿಕೆ ಒಳಗೊಂಡ ‘ಚಂದ್ರಯಾನ–4’ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಪುಟ ಅನುಮೋದನೆ ನೀಡಿದೆ.

2040ರ ವೇಳೆಗೆ ಈ ಉದ್ದೇಶ ಸಾಧನೆಗೆ ಬೇಕಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 

ಈ ಬಾಹ್ಯಾಕಾಶ ಯೋಜನೆಗೆ ಅಗತ್ಯವಿರುವ ಗಗನನೌಕೆ ಅಭಿವೃದ್ಧಿ ಮತ್ತು ಅದರ ಉಡ್ಡಯನದ ಹೊಣೆಯನ್ನು ಇಸ್ರೊ ನಿಭಾಯಿಸುವುದು. ಮೂರು ವರ್ಷಗಳಲ್ಲಿ ಯೋಜನೆ ಸಿದ್ಧಗೊಂಡು, ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಈ ಕಾರ್ಯದಲ್ಲಿ ದೇಶದ ಉದ್ದಿಮೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಭಾಗಿಯಾಗಲಿವೆ.

‘ಚಂದ್ರನ ಮೇಲ್ಮೈಯ ಶಿಲೆ, ಮಣ್ಣು ಮತ್ತಿತರ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲು ಅಗತ್ಯವಿರುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಲಾಗುವುದು. ಈ ಎಲ್ಲ ತಂತ್ರಜ್ಞಾನಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.

ಶುಕ್ರ ಗ್ರಹದತ್ತ ಚಿತ್ತ: ಶುಕ್ರ ಗ್ರಹ ಅಧ್ಯಯನ ಉದ್ದೇಶದ ‘ಶುಕ್ರ ಗ್ರಹ ಕಕ್ಷೆಗಾಮಿ ಕಾರ್ಯಕ್ರಮ’ಕ್ಕೆ ಕೂಡ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಶುಕ್ರ ಗ್ರಹ ಕಕ್ಷೆಗೆ ಗಗನನೌಕೆಯೊಂದನ್ನು ಕಳಿಸಿ, ಅದರ ಮೇಲ್ಮೈ, ವಾತಾವರಣದಲ್ಲಿನ ವಿವಿಧ ಪ್ರಕ್ರಿಯೆಗಳು ಹಾಗೂ ವಾತಾವರಣದ ಮೇಲೆ ಸೂರ್ಯನ ಪ್ರಭಾವ ಕುರಿತು ಅಧ್ಯಯನ ನಡೆಸುವುದು ಯೋಜನೆಯ ಉದ್ದೇಶ.

ಅನಿಮೇಷನ್ ಗೇಮಿಂಗ್: ಉತ್ಕೃಷ್ಟತಾ ಕೇಂದ್ರ ಸ್ಥಾಪನೆ

ಐಐಟಿ ಹಾಗೂ ಐಐಎಂ ಮಾದರಿಯಲ್ಲಿಯೇ ಅನಿಮೇಷನ್ ವಿಷುವಲ್‌ ಎಫೆಕ್ಟ್ಸ್ ಗೇಮಿಂಗ್‌ ಕಾಮಿಕ್ಸ್‌ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ (ಎವಿಜಿಸಿ–ಎಕ್ಸ್‌ಆರ್‌) ಕ್ಷೇತ್ರಕ್ಕೆ ಸಂಬಂಧಿಸಿ ಉತ್ಕೃಷ್ಟತಾ ಕೇಂದ್ರ (ನ್ಯಾಷನಲ್‌ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಫಾರ್ ಅನಿಮೇಷನ್ ವಿಷುವಲ್‌ ಎಫೆಕ್ಟ್ಸ್ ಗೇಮಿಂಗ್‌ ಕಾಮಿಕ್ಸ್‌ ಮತ್ತು ಎಕ್ಸ್‌ಟೆಂಡೆಡ್ ರಿಯಾಲಿಟಿ) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕೇಂದ್ರವನ್ನು ಮುಂಬೈನಲ್ಲಿ ಸ್ಥಾಪಿಸಲಾಗುತ್ತದೆ. ‘ಎವಿಜಿಸಿ–ಎಕ್ಸ್‌ಆರ್‌ ಕ್ಷೇತ್ರವು ಮಾಧ್ಯಮ ಮನರಂಜನೆ ಚಿತ್ರ ತಯಾರಿಕೆ ಒಟಿಟಿ ವೇದಿಕೆಗಳು ಗೇಮಿಂಗ್‌ ಜಾಹೀರಾತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಒಟ್ಟಾರೆ ಪ್ರಗತಿಗೆ ಪೂರಕವೂ ಆಗಿರುವ ಈ ಕ್ಷೇತ್ರಕ್ಕೆ ಉತ್ತೇಜನ ನೀಡುವುದಕ್ಕಾಗಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುತ್ತದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಬುಡಕಟ್ಟುಗಳ ಕಲ್ಯಾಣ ಯೋಜನೆಗೆ ಅನುಮೋದನೆ

ಬುಡಕಟ್ಟು ಸಮುದಾಯಗಳ ಸಾಮಾಜಿಕ–ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದ ‘ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚ ₹79156 ಕೋಟಿ. ಬುಡಕಟ್ಟು ಸಮುದಾಯದವರ ಜನಸಂಖ್ಯೆ ಅಧಿಕವಿರುವ ದೇಶದ 63 ಸಾವಿರ ಗ್ರಾಮಗಳಲ್ಲಿನ ಐದು ಕೋಟಿ ಬುಡಕಟ್ಟು ಕುಟುಂಬಗಳಿಗೆ ಸರ್ಕಾರದ ಎಲ್ಲ ಪ್ರಯೋಜನಗಳನ್ನು ತಲುಪುವಂತೆ ಮಾಡುವುದು ಯೋಜನೆಯ ಉದ್ದೇಶ. 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 549 ಜಿಲ್ಲೆಗಳ 2740 ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT