ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಮೂರನೇ ಹಾಗೂ ಕೊನೆಯ ಹಂತದ ಬಹಿರಂಗ ಪ್ರಚಾರ ಇಂದು (ಭಾನುವಾರ) ಸಂಜೆ ಮುಕ್ತಾಯಗೊಂಡಿದೆ.
ನಾಳೆ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಬಹುದು.
ಮೂರನೇ ಹಂತದಲ್ಲಿ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 1, ಮಂಗಳವಾರ ಮತದಾನ ನಡೆಯಲಿದೆ.
415 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಕಾಂಗ್ರೆಸ್‌ನ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಮುಜಾಫರ್ ಬೇಗ್ ಪ್ರಮುಖರಾಗಿದ್ದಾರೆ.
ಬಿಜೆಪಿ, ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪಿಡಿಪಿ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಭಾಗಿಯಾದವು.
ಸಂವಿಧಾನದ 370ನೇ ವಿಧಿ, ರಾಜ್ಯ ಸ್ಥಾನಮಾನ ಮರುಸ್ಥಾಪನೆ, ಭಯೋತ್ಪಾದನೆ, ನಿರುದ್ಯೋಗ ಮತ್ತು ಮೀಸಲಾತಿ ವಿಷಯಗಳು ಚರ್ಚೆಗೆ ಗ್ರಾಸವಾಗಿವೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌ನ ಪ್ರಮುಖ ನಾಯಕರು ಕೊನೆಯ ಹಂತದ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದರು.
3ನೇ ಹಂತದಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳು:
ಜಮ್ಮು ವಿಭಾಗ: ಜಮ್ಮು, ಉಧಮ್‌ಪುರ, ಸಾಂಬಾ, ಕಥುವಾ
ಉತ್ತರ ಕಾಶ್ಮೀರ ವಿಭಾಗ: ಬಾರಾಮುಲ್ಲಾ, ಬಂಡಿಪೋರ, ಕುಪ್ವಾರ
ಮೊದಲೆರಡು ಹಂತಗಳಲ್ಲಿ ಎಷ್ಟು ಮತದಾನ?
ಸೆ.18, ಮೊದಲ ಹಂತ: ಶೇ 61.38
ಸೆ. 25, ಎರಡನೇ ಹಂತ: ಶೇ 57.31
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಫಲಿತಾಂಶ ಅಕ್ಟೋಬರ್ 4ರಂದು ಪ್ರಕಟಗೊಳ್ಳಲಿದೆ.