ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಧನ ಕಾನೂನು ಬದ್ಧವೇ ಎಂಬುದನ್ನು ಈಗ ಪರಿಶೀಲಿಸಬಹುದೇ: ಸುಪ್ರೀಂ ಕೋರ್ಟ್‌ ಪ್ರಶ್ನೆ

Published 21 ಮೇ 2024, 15:31 IST
Last Updated 21 ಮೇ 2024, 15:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಪ್ರಾಸಿಕ್ಯೂಷನ್‌ ದೂರನ್ನು ವಿಚಾರಣಾ ನ್ಯಾಯಾಲಯವು ಅಧಿಕಾರಯುತವಾಗಿ ಗುರುತಿಸಿದ ನಂತರದಲ್ಲಿ, ಬಂಧನವು ಕಾನೂನುಬದ್ಧವೇ ಎಂಬುದನ್ನು ನ್ಯಾಯಾಲಯವು ಪರಿಶೀಲನೆಗೆ ಒಳಪಡಿಸಬಹುದೇ ಎಂಬ ಪ್ರಶ್ನೆಯನ್ನು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ.

ಜಾಮೀನು ಕೋರಿ ಸೊರೇನ್ ಅವರು ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡಿರುವಾಗ, ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಮಧ್ಯಂತರ ಜಾಮೀನನ್ನು ಹೇಗೆ ನೀಡಬಹುದು ಎಂಬ ಬಗ್ಗೆ ಕೋರ್ಟ್‌ಗೆ ತೃಪ್ತಿಕರ ವಿವರಣೆ ನೀಡಿ ಎಂದು ಸೊರೇನ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಸೂಚಿಸಿದೆ. ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಸತೀಶ್‌ಚಂದ್ರ ಶರ್ಮ ಅವರು ಈ ಪೀಠದಲ್ಲಿ ಇದ್ದಾರೆ.

ಸೊರೇನ್ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಅರುಣಬ್ ಚೌಧರಿ ಅವರು ಪೀಠದ ಪ್ರಶ್ನೆಗಳಿಗೆ ಉತ್ತರಿಸಲು ಬುಧವಾರದವರೆಗೆ ಸಮಯ ಕೋರಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ ಮೇ 10ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇ.ಡಿ. ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಸೊರೇನ್ ಅವರಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಸೊರೇನ್ ಪ್ರಕರಣಕ್ಕೂ ಕೇಜ್ರಿವಾಲ್ ಪ್ರಕರಣಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದರು.

ಸೊರೇನ್ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂಬುದನ್ನು ಕಂಡುಕೊಂಡು, ಪ್ರಾಸಿಕ್ಯೂಷನ್‌ ದೂರನ್ನು ವಿಚಾರಣಾ ನ್ಯಾಯಾಲಯವು ಏಪ್ರಿಲ್‌ 4ರಂದು ಅಧಿಕಾರಯುತವಾಗಿ ಗುರುತಿಸುವ ಕೆಲಸ ಮಾಡಿದೆ ಎಂದು ರಾಜು ವಿವರಿಸಿದರು.

ಸೊರೇನ್ ಅವರು ರಾಜ್ಯದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು, ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಇ.ಡಿ. ಹೇಳಿದೆ. ಕೇಜ್ರಿವಾಲ್‌ ಅವರಿಗೆ ನೀಡಿರುವ ರೀತಿಯಲ್ಲೇ ತಮಗೂ ಮಧ್ಯಂತರ ಜಾಮೀನು ನೀಡಬೇಕು ಎಂದು ಸೊರೇನ್ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT