ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರಗಳನ್ನು ಉರುಳಿಸುವ ಸರಣಿ ಹಂತಕನಂತೆ ವರ್ತಿಸುತ್ತಿರುವ ಬಿಜೆಪಿ: ಎಎಪಿ

Last Updated 26 ಆಗಸ್ಟ್ 2022, 9:40 IST
ಅಕ್ಷರ ಗಾತ್ರ

ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳನ್ನು ಉರುಳಿಸುವ ಸರಣಿ ಹಂತಕನಂತೆ ವರ್ತಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಆರೋಪಿಸಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಸೋಡಿಯಾ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.ಬೇರೆಯವರು (ಬಿಜೆಪಿಯೇತರ ಸರ್ಕಾರಗಳು) ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭದ್ರತೆ ಕಾಡಲಾರಂಭಿಸಿದೆ ಎಂದು ಟೀಕಿಸಿದ್ದಾರೆ.

'ಬೇರೆಯವರು ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಕಂಡು ಪ್ರಧಾನಿ ಮೋದಿ ಅಭದ್ರತೆಯ ಆತಂಕಕ್ಕೊಳಗಾಗಿದ್ದಾರೆ. ಅವರಿಗಿಂತ (ಮೋದಿ) ಅಭದ್ರತೆಯಲ್ಲಿರುವ ಮತ್ತೊಬ್ಬರನ್ನು ನಾನು ಕಂಡಿಲ್ಲ. ಒಂದು ವೇಳೆ ನಾನು ಬೇರೆ ಸರ್ಕಾರದಲ್ಲಿ ಶಿಕ್ಷಣ ಸಚಿವನಾಗಿ,ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿಯಾಗಿದ್ದಿದ್ದರೆ ಅವರು ಮೋದಿಯವರಂತೆ ನಡೆದುಕೊಳ್ಳುತ್ತಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರ ಮಾಡಿರುವ ಎಲ್ಲ ಒಳ್ಳೆಯ ಕ್ರಮಗಳನ್ನೂ ಬೆಂಬಲಿಸಿದ್ದಾರೆ. ಆದರೆ, ಮೋದಿ ಅವರು ಅದಕ್ಕೆ ತದ್ವಿರುದ್ಧವಾಗಿದ್ದಾರೆ ಎಂದು ಕುಟುಕಿದ್ದಾರೆ.

ತಮ್ಮ ನಿವಾಸದಲ್ಲಿಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ದಾಳಿ ಕುರಿತು ಮಾತನಾಡಿರುವ ಸಿಸೋಡಿಯಾ, ಸಿಬಿಐ ಅಧಿಕಾರಿಗಳು 14 ಗಂಟೆಗಳ ಕಾರ್ಯಾಚರಣೆ ವೇಳೆ ನನ್ನ ಮಕ್ಕಳ ಬಟ್ಟೆಗಳನ್ನೂ ಬಿಡದೆ ಹುಡುಕಾಡಿದ್ದಾರೆ. ಆದರೆ, ಅವರಿಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

'ನನ್ನ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಸಂಪೂರ್ಣ ನಕಲಿ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಅವರು (ಬಿಜೆಪಿ) ಬೇರೆ ರಾಜ್ಯಗಳಲ್ಲಿರುವ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವ ಸರಣಿ ಹಂತಕರಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳನ್ನು ಕೆಡವಲು ಅವರು ಹಾಕುತ್ತಿರುವ ಶ್ರಮವನ್ನು, ಶಾಲೆಗಳನ್ನು, ಆಸ್ಪತ್ರೆಗಳನ್ನು ಕಟ್ಟಲು ಹಾಕಲಿ' ಎಂದು ತಿವಿದಿದ್ದಾರೆ.

ಸದ್ಯ ಹಿಂಪಡೆಯಲಾಗಿರುವ ದೆಹಲಿ ಸರ್ಕಾರದ ಅಬಕಾರಿ ನೀತಿ 2021–22 ಅನ್ನೂ ಸಿಸೋಡಿಯಾ ಸಮರ್ಥಿಸಿಕೊಂಡಿದ್ದಾರೆ.

'ಅಬಕಾರಿ ನೀತಿಯಿಂದಾಗಿ ಜನರಿಗೆ ಯಾವುದೇ ಹೊರೆಯಾಗದು. ಸರ್ಕಾರದ ಆದಾಯವೂ ಹೆಚ್ಚಾಗಲಿದೆ. ಆದಾಗ್ಯೂ ಬಿಜೆಪಿಯವರು ಇದರಲ್ಲಿ (ಅಬಕಾರಿ ನೀತಿಯಲ್ಲಿ) ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯು ದೆಹಲಿ ಸರ್ಕಾರವನ್ನು ಕೆಡವಲು 'ಆಪರೇಷನ್‌ ಕಮಲ' ನಡೆಸುತ್ತಿದೆ. ಬಿಜೆಪಿ ಸೇರಿದರೆ ತಲಾ ₹ 20 ಕೋಟಿಯಂತೆ, ₹ 800 ಕೋಟಿ ನೀಡುವುದಾಗಿ ನಮ್ಮ 40 ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಎಎಪಿ ಇತ್ತೀಚೆಗೆ ಆರೋಪಿಸಿದೆ.

ಬಿಜೆಪಿ ಆಮಿಷದ ಕುರಿತು ಎಎಪಿಯ ಎಲ್ಲ ಶಾಸಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಗುರುವಾರ (ಆ.25ರಂದು) ಸಭೆ ನಡೆಸಿದ್ದರು. ಸಭೆ ಬಳಿಕ ಎಲ್ಲರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಬಿಜೆಪಿಯ 'ಆಪರೇಷನ್‌ ಕಮಲ' ವಿಫಲವಾಗಲಿ ಎಂದು ಪ್ರಾರ್ಥಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT