ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಇರುವುದು ಅಪರಾಧಗಳ ತನಿಖೆಗೆ, ರೈಲು ಅಪಘಾತ ಪತ್ತೆಗಲ್ಲ: ಖರ್ಗೆ

Published 5 ಜೂನ್ 2023, 10:32 IST
Last Updated 5 ಜೂನ್ 2023, 10:32 IST
ಅಕ್ಷರ ಗಾತ್ರ

ನವದೆಹಲಿ: ’ಸಿಬಿಐ ಇರುವುದು ಅಪರಾಧಗಳ ಪತ್ತೆ ಕಾರ್ಯಕ್ಕೇ ಹೊರತು ರೈಲ್ವೆ ಅಪಘಾತಗಳ ತನಿಖೆಗಲ್ಲ. ಸರ್ಕಾರದ ಈ ನಡೆಯಿಂದ ತಾಂತ್ರಿಕ, ಸಾಂಸ್ಥಿಕ ಹಾಗೂ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಒಡಿಶಾದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸುವ ರೈಲ್ವೆ ಮಂಡಳಿ ನಿರ್ಧಾರ ಕುರಿತು ಅವರು ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.

’ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಖಾಲಿ ಘೋಷಣೆಗಳು ಈ ಘಟನೆಯಿಂದ ಬಹಿರಂಗಗೊಂಡಿವೆ. ಇಂಥ ಭೀಕರ ಅಪಘಾತಕ್ಕೆ ನೈಜ ಕಾರಣವೇನು ಎಂಬುದರ ಮೇಲೆ ಸರ್ಕಾರ ಬೆಳಕು ಚೆಲ್ಲಬೇಕು. ಭಾರತೀಯ ರೈಲ್ವೆಯಲ್ಲಿ ಸಾಮಾನ್ಯ ಪ್ರಯಾಣಿಕನ ಸುರಕ್ಷತೆಯ ಸವಾಲು ಎದುರಾಗಿದೆ. ಹೀಗಾಗಿ ಈ ಅಪಘಾತ ಹಿಂದಿನ ನೈಜ ಕಾರಣವನ್ನು ಪತ್ತೆ ಮಾಡಿ, ಪ್ರಯಾಣಿಕರ ಹಿತದೃಷ್ಟಿಯಿಂದ ಸುರಕ್ಷತಾ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು‘ ಎಂದು ಆಗ್ರಹಿಸಿದ್ದಾರೆ.

’ರೈಲ್ವೆ ಇಲಾಖೆಯನ್ನು ತಳಮಟ್ಟದಿಂದ ಇನ್ನಷ್ಟು ಸದೃಢಗೊಳಿಸುವ ಬದಲು, ಸದಾ ಸುದ್ದಿಯಲ್ಲಿರಲು ಮೇಲ್ನೋಟಕ್ಕೆ ಇಲಾಖೆಯನ್ನು ಅಂದಗೊಳಿಸುವ ಪ್ರಯತ್ನವನ್ನಷ್ಟೇ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆ ಕುರಿತು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುರಿಸುತ್ತಿದೆ. ನಿರಂತರ ತಪ್ಪು ನಿರ್ಧಾರಗಳಿಂದ ಪ್ರಯಾಣಿಕರಲ್ಲಿ ಗೊಂದಲ ಹಾಗೂ ಸುರಕ್ಷತೆಯ ಪ್ರಶ್ನೆಯನ್ನೂ ಮೂಡಿಸಿದೆ‘ ಎಂದಿದ್ದಾರೆ.‌

’ಜನರು ಆಕ್ರೋಶಗೊಂಡಿದ್ದಾರೆ ಹಾಗೂ ಸತ್ಯ ಏನೆಂದು ತಿಳಿಯಬಯಸುತ್ತಿದ್ದಾರೆ. ಆದರೆ ನೀವು ಮತ್ತು ರೈಲ್ವೆ ಸಚಿವರು ಇರುವ ನೈಜ ಸಮಸ್ಯೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅಪಘಾತಕ್ಕೆ ಮೂಲ ಕಾರಣ ತಿಳಿದುಬಂದಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಹಾಗಿದ್ದರೂ ಪ್ರಕರಣದ ತನಿಖೆ ನಡೆಸಲು ಸಿಬಿಐ ಅನ್ನು ಕೋರಿದ್ದಾರೆ. ಸಿಬಿಐ ಇರುವುದು ಅಪರಾಧ ಕೃತ್ಯಗಳ ಪತ್ತೆಗೇ ಹೊರತು, ರೈಲ್ವೆ ಅಪಘಾತಗಳ ತನಿಖೆಗಲ್ಲ‘ ಎಂದು ಅಸಮಾಧಾನ ವ್ಯಕ್ತಪಿಡಿಸಿದ್ದಾರೆ.

’2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿದ್ದರಿಂದ 150 ಪ್ರಯಾಣಿಕರು ಮೃತಪಟ್ಟರು. ಆಗಲೂ ರೈಲ್ವೆ ಸಚಿವರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಿದ್ದರು. 2017ರ ಚುನಾವಣೆಯಲ್ಲಿ ಇದನ್ನು ನೀವೇ ದೊಡ್ಡ ವಿಷಯವನ್ನಾಗಿ ಭಾಷಣ ಮಾಡಿದ್ದಿರಿ. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟುವ ಭರವಸೆ ನೀಡಿದ್ದಿರಿ. ಆದರೆ 2018ರಲ್ಲಿ ಎನ್‌ಐಎ ಈ ಪ್ರಕರಣವನ್ನೇ ಮುಕ್ತಾಯಗೊಳಿಸಿತು. ಹಾಗಿದ್ದರೆ ಆ 150 ಅಮಾಯಕರ ಸಾವಿಗೆ ಕಾರಣ ಯಾರು ಎಂಬುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ‘ ಎಂದು ಖರ್ಗೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

’ಮಹಾಲೇಖಪಾಲರ ವರದಿಯಂತೆ 2017ರಿಂದ 2021ರವರೆಗೆ ಸಂಭವಿಸಿದ 10 ಪ್ರಮುಖ ಅಪಘಾತಗಳಲ್ಲಿ ಏಳು ಹಳಿ ತಪ್ಪಿದ್ದರಿಂದಲೇ ಆಗಿವೆ ಎಂದು ಹೇಳಲಾಗಿದೆ. ಆದರೆ ಸರ್ಕಾರ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪೂರ್ವ ಕರಾವಳಿ ರೈಲ್ವೆಯಲ್ಲಿ ಟ್ರ್ಯಾಕ್‌ಗಳ ಪರಿಶೀಲನೆ ನಡೆದೇ ಇಲ್ಲ. ರಾಷ್ಟ್ರೀಯ ರೈಲ್ ಸಂರಕ್ಷಾ ಕೋಶ (ಆರ್‌ಆರ್‌ಎಸ್‌ಕೆ)ಕ್ಕೆ ಶೇ 79ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ₹20ಸಾವಿರ ಕೋಟಿ ರೇಲ್ವೆಗೆ ಸಿಗುತ್ತಿಲ್ಲ ಎಂಬುದು ಸ್ಪಷ್ಟ. ಅನುದಾನ ನೀಡಿದ್ದರೆ ಹಳಿಗಳ ನವೀಕರಣ ಕೆಲಸಕ್ಕೆ ಅನುದಾನ ಏಕೆ ಮೀಸಲಿಟ್ಟಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

’ರೈಲ್ವೆ ಇಲಾಖೆಯಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ರೈಲ್ವೆ ಮಂಡಳಿಯೇ ಇತ್ತೀಚೆಗೆ ಹೇಳಿಕೊಂಡಂತೆ, ಸಿಬ್ಬಂದಿ ಕೊರತೆಯಿಂದಾಗಿ ಲೊಕೊ ಪೈಲೆಟ್‌ಗಳು ಹೆಚ್ಚಿನ ಅವಧಿಗೆ ದುಡಿಯಬೇಕಾಗಿದೆ. ನಿಗದಿತ ಅವಧಿಗಿಂತ ಹೆಚ್ಚು ದುಡಿಸಿಕೊಳ್ಳುತ್ತಿರುವುದರಿಂದಲೂ ಅಪಘಾತ ಸಂಭವಿಸಿರುವ ಸಾದ್ಯತೆಗಳಿವೆ. ಹಾಗಿದ್ದರೆ ಖಾಲಿ ಇರುವ ಹುದ್ದೆಗಳ ಭರ್ತಿ ಏಕೆ ಆಗಿಲ್ಲ?‘ ಎಂದೂ ಖರ್ಗೆ ಕೇಳಿದ್ದಾರೆ.

’ರೈಲುಗಳ ನಡುವೆ ಘರ್ಷಣೆ ತಡೆಗಟ್ಟಲು ಜಾರಿಗೆ ತಂದ ’ರಕ್ಷಾ ಕವಚ‘ ವ್ಯವಸ್ಥೆಯನ್ನು ಶೇ 4ರಷ್ಟು ಮಾರ್ಗದಲ್ಲಿ ಮಾತ್ರ ಅಳವಡಿಸಲಾಗಿದೆ. ಇತರೆಡೆ ಈವರೆಗೂ ಏಕೆ ಜಾರಿಗೊಳಿಸಿಲ್ಲ?’ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT