ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರದಲ್ಲೇ ಜನಗಣತಿ ಪ್ರಕ್ರಿಯೆ ಆರಂಭ: ಕೇಂದ್ರ ಸರ್ಕಾರ

Published : 15 ಸೆಪ್ಟೆಂಬರ್ 2024, 15:34 IST
Last Updated : 15 ಸೆಪ್ಟೆಂಬರ್ 2024, 15:34 IST
ಫಾಲೋ ಮಾಡಿ
Comments

ನವದೆಹಲಿ: ‘ಹತ್ತು ವರ್ಷಗಳಿಗೊಮ್ಮೆ ನಡೆಸಲಾಗುವ ಜನಗಣತಿಗೆ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಜಾತಿ ಗಣತಿಯನ್ನು ಜೊತೆಗೆ ನಡೆಸಬೇಕೇ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ’ ಎಂದು ಮೂಲಗಳು ತಿಳಿಸಿವೆ.

ಜನಗಣತಿ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 1881ರಿಂದಲೂ ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದೆ.

ಜನಗಣತಿಯು 2020ರ ಏಪ್ರಿಲ್‌ 1ರಂದೇ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಮುಂ‌ದೂಡಲಾಗಿತ್ತು. ಸಂಸತ್ತು ಕಳೆದ ವರ್ಷ ಅಂಗೀಕರಿಸಿದ್ದ ಮಹಿಳಾ ಮೀಸಲು ಕಾಯ್ದೆಗೂ ಜನಗಣತಿಗೂ ಸಂಬಂಧವಿದೆ.

ಕಾಯ್ದೆಗೆ ಅಂಕಿತ ದೊರೆತ ಬಳಿಕ ನಡೆಯುವ ಮೊದಲ ಜನಗಣತಿಯ ಅಂಕಿ–ಅಂಶ ಆಧರಿಸಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಕಾಯ್ದೆಯು ಜಾರಿಗೊಳ್ಳಲಿದೆ.

ಜಾತಿಗಣತಿ ಕಾಲಂ ಕೂಡ ಇರಲಿದೆಯೇ ಎಂಬ ಪ್ರಶ್ನೆಗೆ, ‘ಅದಿನ್ನೂ ತೀರ್ಮಾನವಾಗಿಲ್ಲ’ ಎಂದು ಮೂಲಗಳು ಪ್ರತಿಕ್ರಿಯಿಸಿವೆ. ವಿವಿಧ ಪಕ್ಷಗಳು ಜಾತಿ ಗಣತಿಯೂ ಆಗಬೇಕು ಎಂದು ಒತ್ತಾಯಿಸಿವೆ.

ಹೊಸ ಅಂಕಿ ಅಂಶಗಳ ಅಲಭ್ಯತೆಯಿಂದಾಗಿ 2011ರ ಜನಗಣತಿ ಅಂಕಿ–ಅಂಶಗಳನ್ನು ಆಧರಿಸಿಯೇ ಸರ್ಕಾರದ ವಿವಿಧ ನೀತಿಗಳು ರೂಪುಗೊಳ್ಳುತ್ತಿದ್ದು, ಅನುದಾನವನ್ನು ಹಂಚಿಕೆ ಮಾಡಲಾಗುತ್ತಿದೆ.

ಅಧಿಕಾರಿಯೊಬ್ಬರ ಪ್ರಕಾರ, ಜನಗಣತಿ ಪ್ರಕ್ರಿಯೆಯನ್ನು ನಡೆಸಲು ಅಂದಾಜು ₹12 ಸಾವಿರ ಕೋಟಿಗೂ ಅಧಿಕ ವೆಚ್ಚವಾಗಬಹುದು.  ಮುಂದೆ ನಡೆಯಲಿರುವ ಜನಗಣತಿಯು ಪ್ರಥಮ ಡಿಜಿಟಲ್‌ ಜನಗಣತಿ ಪ್ರಕ್ರಿಯೆಯೂ ಆಗಿರಲಿದೆ.

ಮನೆಗಳಿಗೇ ತೆರಳಿ, ಜನಗಣತಿಯ ಫಾರ್ಮ್ ಭರ್ತಿ ಮಾಡುವುದು ಸಹಜ ಪ್ರಕ್ರಿಯೆ. ಸ್ವ–ಸಮೀಕ್ಷೆಗೂ ಜನರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿಯೇ ಪೋರ್ಟಲ್ ಲಭ್ಯವಾಗಲಿದೆ. ಅಲ್ಲಿ ಮಾಹಿತಿ ತುಂಬುವವರು ಆಧಾರ್ ಸಂಖ್ಯೆ ಅಥವಾ ಮೊಬೈಲ್‌ ಫೋನ್‌ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.

ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯವು ಜನಗಣತಿ ಪ್ರಕ್ರಿಯೆಗಾಗಿ ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಸಂಪರ್ಕವಿದೆಯೇ, ಸ್ಮಾರ್ಟ್‌ಫೋನ್‌ ಇದೆಯೇ, ಬೈಸಿಕಲ್‌, ಸ್ಕೂಟರ್, ಮೊಪೆಡ್‌ ಇವೆಯೇ, ನಾಲ್ಕುಚಕ್ರದ ವಾಹನವಿದೆಯೇ ಎಂಬ ಪ್ರಶ್ನೆಗಳು ಇದರಲ್ಲಿ ಸೇರ್ಪಡೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT