ಠಾಣೆ: ರೀಲ್ಸ್ ಮಾಡುವ ಸಲುವಾಗಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಸಾರಾದಲ್ಲಿ ನಿಲುಗಡೆ ಆಗಿದ್ದ ಸ್ಥಳೀಯ ರೈಲಿನ ಮೋಟರ್‌ಮ್ಯಾನ್ ಕ್ಯಾಬಿನ್‌ಗೆ ಅನುಮತಿ ಇಲ್ಲದೇ ಪ್ರವೇಶಿಸಿದ್ದ ಇಬ್ಬರು ಯುವಕರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಬಂಧಿಸಿದೆ.
ಆರೋಪಿಗಳನ್ನು ನಾಸಿಕ್ ನಿವಾಸಿಗಳಾದ ರಾಜಾ ಹಿಮ್ಮತ್ ಯೆರ್ವಾಲ್ (20) ಮತ್ತು ರಿತೇಶ್ ಹಿರಾಲಾಲ್ ಜಾಧವ್ (18) ಎಂದು ಗುರುತಿಸಲಾಗಿದೆ.
ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ರಲ್ಲಿ ರೈಲನ್ನು ನಿಲುಗಡೆ ಮಾಡಲಾಗಿತ್ತು. ಆರೋಪಿಗಳಲ್ಲಿ ಒಬ್ಬ ಮೋಟರ್‌ಮ್ಯಾನ್ ಕ್ಯಾಬಿನ್ ಒಳಗೆ ಹೋಗಿದ್ದ. ಮತ್ತೊಬ್ಬ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದನ್ನು ಗಮನಿಸಿದ ಕೇಂದ್ರ ವಿಭಾಗೀಯ ರೈಲ್ವೆಯ (ಸಿಆರ್) ಆರ್‌ಪಿಎಫ್ ಸೈಬರ್ ಸೆಲ್ ಸಹಯೋಗದೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ.
‘ರೀಲ್ಸ್ ಮಾಡುವ ಸಲುವಾಗಿಯೇ ಮೋಟರ್‌ಮ್ಯಾನ್ ಕ್ಯಾಬಿನ್ ಒಳಗೆ ಹೋಗಿದ್ದೆವು‘ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಸಿಆರ್ ನಂಬರ್ 1200/24, ರೈಲ್ವೆ ಕಾಯ್ದೆಯ ಸೆಕ್ಷನ್ 145(ಬಿ) ಮತ್ತು 147 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಟರ್‌ಮ್ಯಾನ್ ಕ್ಯಾಬಿನ್ ಪ್ರವೇಶಿಸುವಂಥ ಅಕ್ರಮ ಎಸಗುವವರಿಗೆ ಇದು ಎಚ್ಚರಿಕೆಯ ಸಂದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆಯ ಆವರಣದಲ್ಲಿ ಇಂಥ ಅಪಾಯಕಾರಿ ಕೃತ್ಯದಲ್ಲಿ ಯಾರಾದರೂ ತೊಡಗಿರುವುದು ಕಂಡುಬಂದರೆ ಕೂಡಲೇ 9004410735 ಅಥವಾ 139ಗೆ ಕರೆಮಾಡುವಂತೆಯೂ ಪ್ರಯಾಣಿಕರಿಗೆ ಸೂಚಿಸಿದ್ದಾರೆ.