ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್ ಉಪಟಳ ನಿಯಂತ್ರಿಸುವಲ್ಲಿ ಕೇಂದ್ರದ ಪಾತ್ರ ಶೂನ್ಯ: ಭೂಪೇಶ್ ಬಘೆಲ್

Published 21 ಅಕ್ಟೋಬರ್ 2023, 16:22 IST
Last Updated 21 ಅಕ್ಟೋಬರ್ 2023, 16:22 IST
ಅಕ್ಷರ ಗಾತ್ರ

ರಾಯಪುರ : ರಾಜ್ಯದಲ್ಲಿ ‘ಡಬಲ್ ಎಂಜಿನ್’ ಸರ್ಕಾರದ ಅವಧಿಯಲ್ಲಿ ನಕ್ಸಲ್ ಹಿಂಸಾಚಾರದ ಘಟನೆಗಳು ಹೆಚ್ಚಿದ್ದವು. ನಕ್ಸಲ್ ಉಪಟಳ ನಿಗ್ರಹಿಸುವಲ್ಲಿ ಕೇಂದ್ರ ಸರ್ಕಾರ ಯಾವುದೇ ಪಾತ್ರ ವಹಿಸಲಿಲ್ಲ ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ದೂರಿದ್ದಾರೆ.‌‌

ತಮ್ಮ ಸರ್ಕಾರದ ಅಭಿವೃದ್ಧಿ, ವಿಶ್ವಾಸ ಮತ್ತು ಭದ್ರತೆ ಕಾರ್ಯತಂತ್ರವು ಮಾವೋವಾದಿಗಳನ್ನು ಹಿಮ್ಮೆಟ್ಟಿಸಲು ಕಾರಣವಾಯಿತು ಎಂದು ಅವರು ಪ್ರತಿಪಾದಿಸಿದರು.

‘ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ ಅಥವಾ ಇಲ್ಲವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಮ್ಮ ಸರ್ಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಹಗರಣಗಳ ಆರೋಪಗಳನ್ನು ನಿರಾಕರಿಸಿದ ಬಘೆಲ್, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಬಳಸಿಕೊಂಡು ಕೇಂದ್ರವು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘ಛತ್ತೀಸಗಢದಲ್ಲಿ 2014 ಮತ್ತು 2018ರಲ್ಲಿ ಡಬಲ್ ಎಂಜಿನ್ (ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ) ಸರ್ಕಾರವಿತ್ತು. ಈ ಸಮಯದಲ್ಲಿ ನಕ್ಸಲ್ ಸಂಬಂಧಿತ ಘಟನೆಗಳು ಹೆಚ್ಚಾದವು. 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ, ನಂಬಿಕೆ ಮತ್ತು ಭದ್ರತೆಯ ಕಾರ್ಯತಂತ್ರ ಜಾರಿಗೆ ತಂದ ಪರಿಣಾಮ ನಕ್ಸಲರು ಹಿಮ್ಮೆಟ್ಟಿದರು. ಇದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ. 

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳ ಆಡಳಿತದಲ್ಲಿ ನಕ್ಸಲ್ ಹಿಂಸಾಚಾರದ ಘಟನೆಗಳು ಶೇಕಡಾ 52ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. 

‘ಬಲಪ್ರಯೋಗದಿಂದ ಮಾತ್ರ ನಕ್ಸಲರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ನಮ್ಮ ಅಧಿಕಾರಾವಧಿಯಲ್ಲಿ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಶಿಬಿರಗಳನ್ನು ತೆರೆಯಲಾಯಿತು. ಸುಮಾರು 600 ಗ್ರಾಮಗಳನ್ನು ನಕ್ಸಲ್‌ ಉಪಟಳದಿಂದ ಮುಕ್ತಗೊಳಿಸಲಾಯಿತು. ನಕ್ಸಲ್‌ ಪೀಡಿತ ಪ್ರದೇಶದಲ್ಲಿ 300 ಶಾಲೆಗಳನ್ನು ತೆರೆದಿದ್ದೇವೆ’ ಎಂದು ಬಘೆಲ್ ಹೇಳಿದ್ದಾರೆ.

ಸಾವಿರಾರು ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT