ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಮುಖ್ಯಸ್ಥರ ಸೇವಾವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮೊರೆ

Published 26 ಜುಲೈ 2023, 15:56 IST
Last Updated 26 ಜುಲೈ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ನಿರ್ಣಾಯಕ ಹಂತದಲ್ಲಿರುವ ಆರ್ಥಿಕ ಕ್ರಿಯಾಯೋಜನೆ ಕಾರ್ಯಪಡೆಯ (ಎಫ್ಎಟಿಎಫ್‌) ದೃಷ್ಟಿಯಿಂದ ಜಾರಿ ನಿರ್ದೇಶನಾಲಯದ (ಇ.ಡಿ) ಮುಖ್ಯಸ್ಥ ಸಂಜಯ್‌ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನು ಅ.15ರವರೆಗೂ ಮುಂದುವರಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

2020ರಿಂದಲೂ ಎಫ್‌ಎಟಿಎಫ್‌ ಪರಾಮರ್ಶೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಅಗತ್ಯವಿರುವುದರಿಂದ, ಮಿಶ್ರಾ ಅವರ ಸೇವಾವಧಿ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

‘ಇ.ಡಿ ಮುಖ್ಯಸ್ಥ ಮಿಶ್ರಾ ಸೇವಾವಧಿಯನ್ನು ಎರಡು ಬಾರಿ ತಲಾ ಒಂದು ವರ್ಷ ವಿಸ್ತರಿಸಿರುವುದೇ ಅಕ್ರಮ’ ಎಂದು ಜುಲೈ 11ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ‘ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿ ನಿರ್ದೇಶನಾಲಯದ ಸುಗಮ ನಿರ್ವಹಣೆಗಾಗಿ ಜುಲೈ 31ರವರೆಗೂ ಮಾತ್ರ ಹುದ್ದೆಯಲ್ಲಿ ಮುಂದುವರಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿ ಸಲ್ಲಿಸಿದರು. ಗುರುವಾರ ವಿಚಾರಣೆ ನಡೆಯಲಿದೆ.

ಎಫ್‌ಎಟಿಎಫ್‌ ಅಂತರ ಸರ್ಕಾರಿ ಸಂಸ್ಥೆ. ಇದು ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯಲು ಶಿಫಾರಸುಗಳನ್ನು ಮಾಡಿದೆ. ಭಾರತ ಸೇರಿದಂತೆ 200 ರಾಷ್ಟ್ರಗಳು ಇದರ ಮಾನದಂಡಗಳನ್ನು ಅನುಷ್ಠಾನಗೊಳಿಸಲು ಬದ್ಧವಾಗಿವೆ. 

ದೇಶದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣ ನಿರ್ವಹಿಸುತ್ತಿರುವ ಏಕೈಕ ಏಜೆನ್ಸಿ ಜಾರಿ ನಿರ್ದೇಶನಾಲಯ. ನಿರ್ಣಾಯಕ ಹಂತದಲ್ಲಿರುವ ಎಫ್‌ಎಟಿಎಫ್‌ಗೆ ಜುಲೈ 21ರಂದು ಅಭಿಪ್ರಾಯಗಳನ್ನು ಸಲ್ಲಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT