ನವದೆಹಲಿ: ಜೆಎಂಎಂ ನಾಯಕ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸೋಮವಾರ ರಾತ್ರಿ ಘೋಷಿಸಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮ ಆಗಸ್ಟ್ 30ರಂದು ರಾಂಚಿಯಲ್ಲಿ ನಡೆಯಲಿದೆ ಎಂದಿದ್ದಾರೆ. ಚಂಪೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಚಿತ್ರವನ್ನು ಹಿಮಂತ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಾರ್ಖಂಡ್ ಬಿಜೆಪಿಯ ಸಹ ಉಸ್ತುವಾರಿ ಆಗಿರುವ ಹಿಮಂತ ಅವರೂ ಜತೆಗಿದ್ದರು.
ಜೆಎಂಎಂ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚಂಪೈ, ‘ಮುಂದಿನ ರಾಜಕೀಯ ನಡೆಯ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇನೆ’ ಎಂದಿದ್ದರು. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.
ಬಿಜೆಪಿಯು ತಮ್ಮ ಪಕ್ಷದ ಶಾಸಕರನ್ನು ಖರೀದಿಸುತ್ತಿದೆ ಎಂದು ಜೆಎಂಎಂ ನಾಯಕ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಈಚೆಗೆ ಆರೋಪಿಸಿದ್ದರು.