ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕಾ ಬಲೂನ್ ಹೊಡೆದಿದ್ದಕ್ಕೆ ಚೀನಾ ಕೆಂಡ: ಅಮೆರಿಕ ವಿರುದ್ಧ ವಾಗ್ದಾಳಿ

Last Updated 5 ಫೆಬ್ರುವರಿ 2023, 14:16 IST
ಅಕ್ಷರ ಗಾತ್ರ

ಬೀಜಿಂಗ್‌: ತನ್ನ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ ಕಚೇರಿ) ಕ್ರಮವನ್ನು ಚೀನಾ ಭಾನುವಾರ ತೀವ್ರವಾಗಿ ಖಂಡಿಸಿದೆ. ‘ಅಮೆರಿಕ ಅತಿಯಾಗಿ ವರ್ತಿಸಿದೆ. ಅಂತರರಾಷ್ಟ್ರೀಯ ನಡಾವಳಿಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ’ ಎಂದು ಆರೋಪಿಸಿದೆ.

‘ಮಾನವರಹಿತ ನಾಗರಿಕ ವಾಯುನೌಕೆಯ ಮೇಲೆ ದಾಳಿ ಮಾಡಲು ಅಮೆರಿಕ ತನ್ನ ಶಸ್ತ್ರಾಸ್ತ್ರ ಬಳಸಿರುವುದರ ವಿರುದ್ಧ ಚೀನಾ ತೀವ್ರ ಅತೃಪ್ತಿ ಮತ್ತು ಪ್ರತಿಭಟನೆಗಳನ್ನು ವ್ಯಕ್ತಪಡಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ‘ಮುಂದೆ ಅಗತ್ಯ ಪ್ರತಿಕ್ರಿಯೆಗಳನ್ನು ನೀಡುವ ನಮ್ಮ ಹಕ್ಕುಗಳನ್ನು ನಾವು ಕಾದಿರಿಸಿದ್ದೇವೆ’ ಎಂದೂ ಚೀನಾ ಹೇಳಿದೆ.

‘ವಿಷಯವನ್ನು ಶಾಂತವಾಗಿ, ವೃತ್ತಿಪರವಾಗಿ ಮತ್ತು ಸಂಯಮದಿಂದ ನಿರ್ವಹಿಸುವಂತೆ ಅಮೆರಿಕಕ್ಕೆ ವಿನಂತಿ ಮಾಡಲಾಗಿತ್ತು’ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಭಾನುವಾರ ಹೇಳಿದೆ.

‘ಚೀನಾ ಸಂಬಂಧಿತ ಉದ್ಯಮಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಲಾಗುತ್ತದೆ. ಅಗತ್ಯ ಪ್ರತಿಕ್ರಿಯೆ ನೀಡುವ ಹಕ್ಕನ್ನು ಚೀನಾ ಕಾದಿರಿಸುತ್ತದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕದ ಫೈಟರ್‌ ಜೆಟ್‌ಗಳು ಶನಿವಾರ ಮಧ್ಯಾಹ್ನ ಹೊಡೆದುರುಳಿಸಿದ್ದವು.

ಇದು ಚೀನಾದಿಂದ ಆಗಿರುವ ಅಮೆರಿಕ ಸಾರ್ವಭೌಮತೆಯ ಉಲ್ಲಂಘನೆ ಎಂದು ಪೆಂಟಗನ್‌ ಹೇಳಿದೆ.

ಅಮೆರಿಕ ವಾಯು, ಜಲಪ್ರದೇಶದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಹೊಡೆದುಹಾಕಿದ ಯುದ್ಧ ವಿಮಾನದ ಪೈಲಟ್‌ಗಳನ್ನು ದೇಶದ ಅಧ್ಯಕ್ಷ ಜೋ ಬೈಡನ್‌ ಅವರು ಅಭಿನಂದಿಸಿದರು.

‘ಫೈಟರ್‌ ಜೆಟ್‌ಗಳು ಬಲೂನ್‌ ಅನ್ನು ಯಶಸ್ವಿಯಾಗಿ ಒಡೆದುಹಾಕಿವೆ. ನಮ್ಮ ತಂಡವನ್ನು ನಾನು ಅಭಿನಂದಿಸುತ್ತೇನೆ’ ಎಂದು ಬೈಡನ್‌ ಅವರು ಮೇರಿಲ್ಯಾಂಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಲೂನ್‌ ಅನ್ನು ಒಡೆಹಾಕಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇದು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ‌ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾದಿಂದ ಆಗಿರುವ ನಮ್ಮ ಸಾರ್ವಭೌಮತ್ವದ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT