ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ದೀವ್ಸ್‌ನಲ್ಲಿ ಅನ್ಯರ ಹಸ್ತಕ್ಷೇಪಕ್ಕೆ ಚೀನಾ ವಿರೋಧ

Published 11 ಜನವರಿ 2024, 17:03 IST
Last Updated 11 ಜನವರಿ 2024, 17:03 IST
ಅಕ್ಷರ ಗಾತ್ರ

ಬೀಜಿಂಗ್ : ಮಾಲ್ದೀವ್ಸ್‌ನ ಆಂತರಿಕ ವಿಚಾರಗಳಲ್ಲಿ ಅನ್ಯರ ಹಸ್ತಕ್ಷೇಪವನ್ನು ಬಲವಾಗಿ ವಿರೋಧಿಸುವುದಾಗಿ ಚೀನಾ ಗುರುವಾರ ಹೇಳಿದೆ. ಮಾಲ್ದೀವ್ಸ್‌ ದೇಶಕ್ಕೆ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ಬೆಂಬಲ ನೀಡುವುದಾಗಿ ತಿಳಿಸಿದೆ.

ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಅವರು ತಮ್ಮ ಮೊದಲ ಚೀನಾ ಭೇಟಿಯನ್ನು ಕೊನೆಗೊಳಿಸುವ ದಿನ ಈ ಮಾತು ಹೇಳಿದೆ. ‘ಎರಡೂ ದೇಶಗಳು ತಮ್ಮ ಪ್ರಮುಖ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ಪರಸ್ಪರರ ಬೆಂಬಲಕ್ಕೆ ನಿಲ್ಲುವುದನ್ನು ಮುಂದುವರಿಸಲು ಒಪ್ಪಿಕೊಂಡಿವೆ’ ಎಂದು ಮುಯಿಜು ಮತ್ತು ಚೀನಾದ ಪ್ರಮುಖ ನಾಯಕರ ಜೊತೆಗಿನ ಮಾತುಕತೆಯ ಕೊನೆಯಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಮಾಲ್ದೀವ್ಸ್ ತನ್ನ ರಾಷ್ಟ್ರೀಯ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ರಾಷ್ಟ್ರದ ಘನತೆಯನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಚೀನಾ ಬೆಂಬಲ ನೀಡಲಿದೆ... ಮಾಲ್ದೀವ್ಸ್‌ನ ಆಂತರಿಕ ವಿಚಾರಗಳಲ್ಲಿ ಅನ್ಯರ ಹಸ್ತಕ್ಷೇಪವನ್ನು ವಿರೋಧಿಸುತ್ತದೆ’ ಎಂಬ ಹೇಳಿಕೆಯಲ್ಲಿ ಚೀನಾ ಇತರ ಯಾವುದೇ ದೇಶವನ್ನು ಹೆಸರಿಸಿಲ್ಲ.

ಮಾಲ್ದೀವ್ಸ್‌ನ ಮೂವರು ಉಪ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಂತರದಲ್ಲಿ, ಮಾಲ್ದೀವ್ಸ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ಚೀನಾ ಈ ಮಾತು ಹೇಳಿದೆ. ಮುಯಿಜು ಅವರು ಚೀನಾ ಪರ ಒಲವು ಹೊಂದಿದ್ದಾರೆ. ಅವಹೇಳನಕಾರಿ ಮಾತುಗಳನ್ನು ಆಡಬಾರದು ಎಂಬ ಎಚ್ಚರಿಕೆ ನೀಡಿ ಮುಯಿಜು ಅವರು ಈ ಉಪಸಚಿವರನ್ನು ಅಮಾನತು ಮಾಡಿದ್ದಾರೆ.

ಮುಯಿಜು ಅವರ ಚೀನಾ ಭೇಟಿ ಹೊತ್ತಿನಲ್ಲಿ, ಐರೋಪ್ಯ ಒಕ್ಕೂಟದ ಮಾಲ್ದೀವ್ಸ್‌ಗೆ ಸಂಬಂಧಿಸಿದ ಚುನಾವಣಾ ಕಣ್ಗಾವಲು ಸಮಿತಿಯು ವರದಿಯೊಂದನ್ನು ಬಿಡುಗಡೆ ಮಾಡಿದೆ. ಮಾಲ್ದೀವ್ಸ್‌ನ ಆಡಳಿತಾರೂಢ ಮೈತ್ರಿಕೂಟವು 2023ರ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ವಿರೋಧಿ ಭಾವನೆಗಳನ್ನು ಹರಡುವ ಕೆಲಸ ಮಾಡಿತ್ತು ಎಂದು ವರದಿ ಹೇಳಿದೆ.

ಏಕ ಚೀನಾ ತತ್ವಕ್ಕೆ ತಾನು ಬದ್ಧತೆಯನ್ನು ವ್ಯಕ್ತಪಡಿಸುತ್ತಿರುವುದಾಗಿ ಮಾಲ್ದೀವ್ಸ್ ಹೇಳಿದೆ. ತೈವಾನ್ ದೇಶವು ಚೀನಾ ಅವಿಭಾಜ್ಯ ಅಂಗ ಎಂಬ ಮಾತನ್ನು ಕೂಡ ಮಾಲ್ದೀವ್ಸ್‌ನ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಚೀನಾದ ಸಾರ್ವಭೌಮತ್ವವನ್ನು ಹಾಳುಮಾಡುವ ಯಾವುದೇ ಹೇಳಿಕೆ ಅಥವಾ ಕ್ರಿಯೆಯನ್ನು ವಿರೋಧಿಸುವುದಾಗಿ ಮಾಲ್ದೀವ್ಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT