ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋ‍ಕಸಭೆಯಲ್ಲಿ ಭದ್ರತಾ ಲೋಪ: ಸಂಸತ್‌ ಭವನದ ರಕ್ಷಣೆ ‘ಸಿಐಎಸ್ಎಫ್' ಹೆಗಲಿಗೆ?

Published 21 ಡಿಸೆಂಬರ್ 2023, 13:56 IST
Last Updated 21 ಡಿಸೆಂಬರ್ 2023, 13:56 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ನಲ್ಲಿ ಭದ್ರತಾ ಲೋಪ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಸಂಸತ್‌ ಸಂಕೀರ್ಣದ ಸಂಪೂರ್ಣ ಭದ್ರತೆಯ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಗೆ ಹಸ್ತಾಂತರಿಸಲು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಐಎಸ್ಎಫ್ ಹೊಸ ಮತ್ತು ಹಳೆಯ ಸಂಸತ್‌ ಸಂಕೀರ್ಣಕ್ಕೆ ವಿಮಾನ ನಿಲ್ದಾಣದ ಭದ್ರತೆಯ ಮಾದರಿಯಲ್ಲಿ ಭದ್ರತೆ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ದೆಹಲಿ ಪೊಲೀಸ್ ಸಿಬ್ಬಂದಿ ಸಂಸತ್‌ ಸಂಕೀರ್ಣಕ್ಕೆ ಭೇಟಿ ನೀಡುವವರನ್ನು ತಪಾಸಣೆ ನಡೆಸುತ್ತಿದ್ದರು.

ಡಿಸೆಂಬರ್ 13ರಂದು ಭಾರಿ ಭದ್ರತಾ ಲೋಪಕ್ಕೆ ಲೋಕಸಭೆ ಸಾಕ್ಷಿಯಾಗಿತ್ತು. ಕಲಾಪ ನಡೆಯುತ್ತಿರುವಾಗಲೇ ಸಾಗರ್ ಶರ್ಮಾ ಮತ್ತು ಡಿ. ಮನೋರಂಜನ್ ಎಂಬ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ ಹಾರಿಸಿ ದಾಂದಲೆ ಎಬ್ಬಿಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಈ ಬೆಳವಣಿಗೆಗಳ ನಡುವೆ ಕೇಂದ್ರ ಗೃಹ ಸಚಿವಾಲಯ ಸಂಸತ್‌ ಕಟ್ಟಡದ ಸಮೀಕ್ಷೆಗೆ ಬುಧವಾರ(ಡಿ.20) ನಿರ್ದೇಶನ ನೀಡಿದೆ. ಹೀಗಾಗಿ ಸಿಐಎಸ್‌ಎಫ್ ಮತ್ತು ಅಗ್ನಿಶಾಮಕ ದಳವನ್ನು ಸಮಗ್ರ ಮಾದರಿಯಲ್ಲಿ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾತ್ವಿಕ ಅನುಮೋದನೆ:

ಸಂಸತ್‌ ಕಟ್ಟಡದ ಒಟ್ಟಾರೆ ಭದ್ರತೆಯ ಜವಾಬ್ದಾರಿಯನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲು ಗೃಹ ವ್ಯವಹಾರಗಳ ಸಚಿವಾಲಯ (MHA) ತಾತ್ವಿಕ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಸಿಐಎಸ್‌ಎಫ್‌ನ ಸರ್ಕಾರಿ ಕಟ್ಟಡ ಭದ್ರತಾ (ಜಿಬಿಎಸ್) ಘಟಕದ ತಜ್ಞರು, ಕೇಂದ್ರ ಸರ್ಕಾರದ ಸಚಿವಾಲಯಗಳು, ಅಗ್ನಿಶಾಮಕ ಹಾಗೂ ಪ್ರಸ್ತುತ ಸಂಸತ್ತಿನ ಭದ್ರತಾ ತಂಡದ ಅಧಿಕಾರಿಗಳೊಂದಿಗೆ ಈ ವಾರದ ಕೊನೆಯಲ್ಲಿ ಸಮೀಕ್ಷೆ ಕೈಗೊಳ್ಳಲಿದ್ದಾರೆ.

ಹೊಸ ಮತ್ತು ಹಳೆಯ ಸಂಸತ್‌ ಸಂಕೀರ್ಣ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಟ್ಟಡಗಳನ್ನು ಸಿಐಎಸ್‌ಎಫ್‌ನ ಸಮಗ್ರ ಭದ್ರತೆಯ ಅಡಿಯಲ್ಲಿ ತರಲಾಗುವುದು. ಇದು ಸಂಸತ್ತಿನ ಭದ್ರತಾ ಸೇವೆ (ಪಿಎಸ್‌ಎಸ್), ದೆಹಲಿ ಪೊಲೀಸ್ ಮತ್ತು ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ (ಪಿಡಿಜಿ)ಯ ಭದ್ರತೆಯಲ್ಲಿ ಮುಂದುವರಿಯಲಿದೆ ಎಂದು ಸಿಆರ್‌ಪಿಎಫ್ ಮೂಲಗಳು ತಿಳಿಸಿವೆ.

ಭದ್ರತಾ ಲೋಪದ ಬಳಿಕ ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ಅವರ ಅಧ್ಯಕ್ಷತೆಯ ಸಮಿತಿ ಸಂಸತ್‌ ಸಂಕೀರ್ಣದ ಸಮಗ್ರ ಭದ್ರತಾ ಸಮಸ್ಯೆಗಳನ್ನು ಪರಿಶೀಲಿಸುತ್ತಿದೆ. ಜತೆಗೆ ಸುಧಾರಣೆಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಲಿದೆ.

ಸಿಐಎಸ್ಎಫ್ ಬಗ್ಗೆ ಒಂದಿಷ್ಟು..

2001ರ ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯ ನಂತರ ಸಿಐಎಸ್ಎಫ್, ಜಿಬಿಎಸ್ ಅಸ್ತಿತ್ವಕ್ಕೆ ಬಂದಿದೆ. ಇದು ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು, ಕ್ಯಾಬಿನೆಟ್ ಸೆಕ್ರೆಟರಿಯೇಟ್, ವಿಜ್ಞಾನ ಭವನ, ಸಿಬಿಐ ಪ್ರಧಾನ ಕಛೇರಿ, ಯುಪಿಎಸ್‌ಸಿ ಕಟ್ಟಡ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಕಟ್ಟಡಗಳ ಭದ್ರತೆ ಜವಾಬ್ದಾರಿಯನ್ನು ಹೊತ್ತಿದೆ.

ಸಿಐಎಸ್ಎಫ್ ಎಂಬುವುದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಆಗಿದೆ. ‌ಇದು ಪ್ರಸ್ತುತ ದೆಹಲಿಯಲ್ಲಿನ ಅನೇಕ ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡ, ಪರಮಾಣು ಮತ್ತು ಏರೋಸ್ಪೇಸ್ ಡೊಮೇನ್, 67 ಸಿವಿಲ್ ಏರ್‌ಪೋರ್ಟ್‌ಗಳು ಮತ್ತು ದೆಹಲಿ ಮೆಟ್ರೋ ನಿಲ್ದಾಣಗಳಿಗೆ ಭದ್ರತೆ ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT