ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ

Published 14 ಮಾರ್ಚ್ 2024, 5:08 IST
Last Updated 14 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ಅಮಿತ್‌ ಶಾ, 'ಸಿಎಎ ಅಸಾಂವಿಧಾನಿಕ' ಎಂಬ ಪ್ರತಿಪಕ್ಷಗಳ ಆರೋಫವನ್ನು ತಳ್ಳಿಹಾಕಿದ್ದಾರೆ.

ಎಎನ್‌ಐ ಜೊತೆ ಮಾತನಾಡಿರುವ ಶಾ, 'ಇದು (ಸಿಎಎ) ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವುದಿಲ್ಲ' ಎಂದು ಹೇಳಿದ್ದಾರೆ.

'ಸಿಎಎ ಅಸಾಂವಿಧಾನಿಕ' ಎಂಬ ಆರೋಪವನ್ನು ತಳ್ಳಿಹಾಕಿರುವ ಶಾ, 'ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ' ಎಂದಿದ್ದಾರೆ.

2024ರಲ್ಲಿ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, 'ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ' ಎಂದಿದ್ದಾರೆ.

ಮುಂದುವರಿದು, 'ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು, ಈ ಕಾನೂನು 'ಮುಸ್ಲಿಂ ವಿರೋಧಿ' ಎಂದಿದ್ದಾರೆ. ಓವೈಸಿ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ, 'ಅವರ ತರ್ಕವೇನು? ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT