ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆಯಿಂದ ಸಾಂವಿಧಾನಿಕ ಹಕ್ಕಿಗೆ ಧಕ್ಕೆ: ಸುಪ್ರೀಂ ಕೋರ್ಟ್‌

Published 8 ಏಪ್ರಿಲ್ 2024, 16:16 IST
Last Updated 8 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ನವದೆಹಲಿ: ಹವಾಮಾನ ಬದಲಾವಣೆಯು ಸಾಂವಿಧಾನಿಕ ಹಕ್ಕಾಗಿರುವ ಸಮಾನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಅವಸಾನದ ಅಂಚಿಗೆ ತಲುಪಿರುವ ಹೆಬ್ಬಕಗಳ (ಗ್ರೇಟ್ ಇಂಡಿಯನ್ ಬಸ್ಟರ್ಡ್‌) ಪಕ್ಷಿಯ ಸಂರಕ್ಷಣೆ ಹಾಗೂ ರಾಜಸ್ಥಾನ, ಗುಜರಾತ್‌ನಲ್ಲಿ ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಕಲ್ಪಿಸುವುದರ ನಡುವೆ ಸಮತೋಲನ ಕಂಡುಕೊಳ್ಳಲು ಸಮಿತಿಯೊಂದನ್ನು ರಚಿಸಿದೆ.

ರಾಜಸ್ಥಾನ ಹಾಗೂ ಗುಜರಾತ್‌ನ 80 ಸಾವಿರ ಚದರ ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳನ್ನು ನೆಲದ ಅಡಿಯಲ್ಲಿ ಅಳವಡಿಸುವ ಕೆಲಸ ಆಗಬೇಕು ಎಂದು 2021ರ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ, ಮನೋಶ್ ಮಿಶ್ರಾ ಅವರು ಇದ್ದ ಪೀಠವು ಹಿಂದಡೆದಿದೆ.

‘ಹವಾಮಾನ ಬದಲಾವಣೆಯು ಸಂವಿಧಾನ ನೀಡಿರುವ ಸಮಾನತೆಯ ಹಕ್ಕಿನ ಮೇಲೆ ಪರಿಣಾಮ ಉಂಟುಮಾಡಬಹುದು. ಸ್ವಚ್ಛವಾದ ಪರಿಸರ ಇಲ್ಲದಿದ್ದರೆ ಜೀವಿಸುವ ಸ್ವಾತಂತ್ರ್ಯವು ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳುವುದಿಲ್ಲ. ವಾಯುಮಾಲಿನ್ಯ, ತಾಪಮಾನ ಹೆಚ್ಚಳ, ಬರ, ಬೆಳೆ ಹಾನಿಯಿಂದಾಗಿ ಆಹಾರ ಪೂರೈಕೆಯಲ್ಲಿ ಕೊರತೆ, ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ಪೀಠ ಹೇಳಿದೆ.

ಹೆಬ್ಬಕಗಳು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅವು ವಿದ್ಯುತ್‌ ತಂತಿಗೆ ಡಿಕ್ಕಿ ಹೊಡೆದು ಸಾಯುತ್ತವೆ, ಇದು ಅವುಗಳ ಸಂಖ್ಯೆಯಲ್ಲಿ ಆಗಿರುವ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಹೆಬ್ಬಕಗಳು ಹಾರುವಾಗ ವಿದ್ಯುತ್ ಪ್ರವಹಿಸುತ್ತಿರುವ ತಂತಿ ಎದುರಾದಲ್ಲಿ, ಅವುಗಳಿಗೆ ತಕ್ಷಣಕ್ಕೆ ತಮ್ಮ ಪಥ ಬದಲಿಸಿಕೊಳ್ಳುವುದು ಕಷ್ಟವಾಗುತ್ತದೆ.

‘ಪ್ರತಿ ವ್ಯಕ್ತಿಯೂ ಸ್ವಚ್ಛವಾದ, ಸುರಕ್ಷಿತವಾದ ಹಾಗೂ ಆರೋಗ್ಯಕರ ಜೀವನಕ್ಕೆ ಪೂರಕವಾದ ಪರಿಸದರದಲ್ಲಿ ಬದುಕು ಸಾಗಿಸುವ ಹಕ್ಕು ಹೊಂದಿದ್ದಾನೆ ಎಂಬ ತತ್ವವನ್ನು ಆರೋಗ್ಯಕರ ಪರಿಸರದ ಹಕ್ಕು ಒಳಗೊಳ್ಳುತ್ತದೆ. ಆರೋಗ್ಯಕರ ಪರಿಸರದ ಹಕ್ಕನ್ನು, ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಂದ ಮುಕ್ತವಾಗಿರುವ ಹಕ್ಕನ್ನು ಗುರುತಿಸುವ ಮೂಲಕ ರಾಜ್ಯ ಸರ್ಕಾರಗಳು ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗುತ್ತದೆ. ಆ ಮೂಲಕ ಅವು ಹವಾಮಾನ ಬದಲಾವಣೆಯ ಮೂಲ ಕಾರಣವನ್ನು ಸರಿಪಡಿಸಬೇಕಾಗುತ್ತದೆ’ ಎಂದು ಪೀಠ ಹೇಳಿದೆ.

‘ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ತನ್ನ ಮೇಲಿರುವ ಹೊಣೆಗಳನ್ನು ಭಾರತ ನಿರ್ವಹಿಸಬೇಕಾಗುತ್ತದೆ. ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವ, ಹವಾಮಾನ ಬದಲಾವಣೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ತಂದುಕೊಳ್ಳುವ ಹಾಗೂ ಆರೋಗ್ಯರ ಮತ್ತು ಸುಸ್ಥಿರ ಪರಿಸರದಲ್ಲಿ ಬದುಕುವ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ’ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT