ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತನಿಖಾ ಸಂಸ್ಥೆಗಳಿಂದ ಎಲೆಕ್ಟ್ರಾನಿಕ್ ಉಪಕರಣ ವಶ:ಮಾರ್ಗಸೂಚಿ ರಚಿಸುತ್ತಿರುವ ಕೇಂದ್ರ

Published 6 ಡಿಸೆಂಬರ್ 2023, 16:51 IST
Last Updated 6 ಡಿಸೆಂಬರ್ 2023, 16:51 IST
ಅಕ್ಷರ ಗಾತ್ರ

ನವದೆಹಲಿ: ತನಿಖಾ ಸಂಸ್ಥೆಗಳು ಫೋನ್‌ ಮತ್ತು ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳುವಾಗ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತದೆ, ಇದಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ವ್ಯಕ್ತಿಗಳ, ಅದರಲ್ಲೂ ಮುಖ್ಯವಾಗಿ ಮಾಧ್ಯಮ ಪ್ರತಿನಿಧಿಗಳ, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯುವಾಗ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಸುಪ್ರೀಂ ಕೋರ್ಟ್‌ ನವೆಂಬರ್ 7ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದು ಗಂಭೀರ ವಿಚಾರ ಎಂದು ಕೂಡ ಹೇಳಿತ್ತು.

ಮಾರ್ಗಸೂಚಿ ರೂಪಿಸಲಾಗುತ್ತದೆ ಎಂಬ ಮಾಹಿತಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ಮಾರ್ಗಸೂಚಿ ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ.

ನ್ಯೂಸ್‌ಕ್ಲಿಕ್‌ ಪ್ರಕರಣದಲ್ಲಿ 90 ಮಂದಿ ಪತ್ರಕರ್ತರ 300 ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ವಕೀಲರು ಪೀಠಕ್ಕೆ ತಿಳಿಸಿದರು. ‘ಉಪಕರಣಗಳು ಇಲ್ಲವಾದ ಕಾರಣ ಅವರಿಗೆ ಕೆಲಸ ಮಾಡಲು ಕೂಡ ಆಗುತ್ತಿಲ್ಲ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಹಲ್ಲೆ’ ಎಂದು ಅವರು ಹೇಳಿದರು.

ಮಾರ್ಗಸೂಚಿ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ನಿತ್ಯಾ ಹೇಳಿದರು. ‘ರಾಜು ಅವರೇ, ಏನು ಸಮಸ್ಯೆ? ಒಂದು ಕಾಲಮಿತಿ ಇರಬೇಕು’ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ‘ನಾವು ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ, ಕೆಲವು ಮಾರ್ಗಸೂಚಿಗಳು ಬರಲಿವೆ’ ಎಂದು ರಾಜು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT