ಹೈದರಾಬಾದ್: ತೆಲಂಗಾಣದ ಕೋಮರಂ ಭೀಮ್ ಅಸಿಫಾಬಾದ್ ಜಿಲ್ಲೆಯ ಜೈನೂರ್ ಪಟ್ಟಣದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆಯು ಕೋಮು ಘರ್ಷಣೆಗೆ ತಿರುಗಿದ್ದು, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
45 ವರ್ಷ ವಯಸ್ಸಿನ ಆದಿವಾಸಿ ಮಹಿಳೆ ಮೇಲೆ ಆಗಸ್ಟ್ 31ರಂದು ಆಟೊ ಚಾಲಕ ಮುಕ್ದುಮ್, ಅತ್ಯಾಚಾರ ಹಾಗೂ ಕೊಲೆಗೆ ಯತ್ನಿಸಿದ್ದ. ಇದನ್ನು ಖಂಡಿಸಿ ತುಡುಂ ಡೆಬ್ಬಾ ಸೇರಿದಂತೆ ವಿವಿದ ಆದಿ ವಾಸಿ ಸಂಘಟನೆಗಳು, ಜೈನೂರ್ ಬಂದ್‌ಗೆ ಕರೆ ನೀಡಿದ್ದವು. ಕೃತ್ಯದ ಸಂಬಂಧ ಆಟೊ ಚಾಲಕನ ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯವನ್ನು ಖಂಡಿಸಿ ಆದಿವಾಸಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು.
ಬುಧವಾರ ಮಧ್ಯಾಹ್ನ ಒಂದು ಹಂತ ದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಪರಸ್ಪರರಿಗೆ ಸೇರಿದ್ದ ಆಸ್ತಿಗಳಿಗೆ ಹಾನಿಗೆ ಮುಂದಾಗಿದ್ದಾರೆ. ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಕೃತ್ಯಗಳೂ ನಡೆದವು.
‘ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಮುಂಜಾಗ್ರತೆಯಾಗಿ ಘರ್ಷಣೆ ನಡೆದ ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘರ್ಷಣೆ ಬಾಧಿತ ಪ್ರದೇಶಗಳಲ್ಲಿ ಪೊಲೀಸರು ಗಸ್ತು ನಡೆಸಿದರು.
ಅತ್ಯಾಚಾರ ಪ್ರಕರಣ ಆರೋಪಿ ಯನ್ನು ಈಗಾಗಲೇ ಬಂಧಿಸಿದ್ದು, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಾಗರಿಕರು ಪ್ರಚೋದನೆಗೆ ಒಳಗಾಗದೇ ಸಂಯಮ ಕಾಯ್ದುಕೊಳ್ಳಬೇಕು ಎಂದು ಉಭಯ ಸಮುದಾಯದವರಿಗೆ ಪೊಲೀಸರು ಮನವಿ ಮಾಡಿದ್ದಾರೆ.