ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು: ಸುಪ್ರೀಂ ಕೋರ್ಟ್‌

Published 8 ಏಪ್ರಿಲ್ 2024, 15:44 IST
Last Updated 8 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ನವದೆಹಲಿ: ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಸಲ್ಲದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ಬರ ‍‍ಪರಿಹಾರವಾಗಿ ₹35,162 ಕೋಟಿಯನ್ನು ತಕ್ಷಣ ಹಣ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠವು, ‘ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ’ ಎಂದು ಹೇಳಿತು. 

ಕರ್ನಾಟಕದ ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್‌ ಆರ್.ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ನೋಟಿಸ್‌ ನೀಡದಂತೆ ಮನವಿ ಮಾಡಿದರು. ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ತಿಳಿಸಿದರು. 

‘ಏಕೆ ಎಂದು ಹೇಳಲು ನಾನು ಬಯಸುವುದಿಲ್ಲ. ಆದರೆ, ಚುನಾವಣಾ ಸಮಯದಲ್ಲಿ ಇದು ಬೆಳೆಯುತ್ತಿರುವ ಪ್ರವೃತ್ತಿಯಾಗಿದೆ’ ಎಂದು ತುಷಾರ್ ಮೆಹ್ತಾ ಹೇಳಿದರು. ನ್ಯಾಯಾಲಯವು ಔಪಚಾರಿಕ ನೋಟಿಸ್‌ ನೀಡಬಾರದು. ಅದು ಸಹ ಸುದ್ದಿಯಾಗುತ್ತದೆ. ಪ್ರತಿಕ್ರಿಯೆ ನೀಡಲು ನಾವು ಇಲ್ಲಿದ್ದೇವೆ’ ಎಂದು ಅವರು ಮನವಿ ಮಾಡಿದರು. ಇದನ್ನು ಗಮನಿಸಿದ ಪೀಠವು, ಎರಡು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು. 

ಕೇಂದ್ರಕ್ಕೆ ತರಾಟೆ: ಕೃಷ್ಣ ಬೈರೇಗೌಡ

‘ಅರ್ಜಿ ವಿಚಾರಣೆ ವೇಳೆ ಪೀಠವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿದೆ. ಅರ್ಜಿ ಬಗ್ಗೆ ಎರಡು ವಾರಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳು ವಂತೆ ಕೇಂದ್ರಕ್ಕೆ ಸೂಚಿಸಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಪ್ರಕರಣದ ವಿಚಾರಣೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಕಾಲಮಿತಿಯೊಳಗೆ ಕೇಂದ್ರ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಇಂತಹ ಕೆಲಸದ ಬಗ್ಗೆ ತಕರಾರು ಅರ್ಜಿಯನ್ನು ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಂಡಿದ್ದರೆ ಈ ಅರ್ಜಿ ಸಲ್ಲಿಕೆ ಆಗುತ್ತಿರಲಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ’ ಎಂದರು. 

‘ರಾಜ್ಯದ ವಾದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ. ಈಗಲಾದರೂ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇವೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರವಾಗಿ ₹4,663 ಕೋಟಿ ಬಿಡುಗಡೆ ಮಾಡಿದರೆ ಪ್ರತಿ ರೈತರಿಗೆ ₹14 ಸಾವಿರ ನೀಡಬಹುದು’ ಎಂದರು.

ಕೇಂದ್ರದಿಂದ ‘ಸುಪ್ರೀಂ’ಗೂ ತಪ್ಪು ಮಾಹಿತಿ– ಸಿಎಂ

ಬೆಂಗಳೂರು: ‘ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಕೂಡಾ ತಪ್ಪು ಮಾಹಿತಿ ನೀಡಿ, ನ್ಯಾಯಾಲಯದ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ಕರ್ನಾಟಕಕ್ಕೆ ನೀಡಬೇಕಾಗಿರುವ ಬರ ಪರಿಹಾರ ನೀಡದೆ 5–6 ತಿಂಗಳಿಂದ ಕೇಂದ್ರ ಸರ್ಕಾರ ಸತಾಯಿಸುತ್ತಿರುವುದರಿಂದ ಬೇರೆ ದಾರಿ ಇಲ್ಲದೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ತುಷಾರ್ ಮೆಹ್ತಾ ಅವರು, ಬರ ಪರಿಹಾರ ವಿಳಂಬಕ್ಕೆ ಕರ್ನಾಟಕ ಸರ್ಕಾರವೇ ಕಾರಣ. ಅದರ ಹಿಂದೆ ರಾಜಕೀಯ ಉದ್ದೇಶವಿದೆಯೆಂಬ ಅಭಿಪ್ರಾಯ ಮೂಡುವಂತೆ ವಾದ ಮಾಡಿದ್ದಾರೆ. ಇದು ಖಂಡನೀಯ’ ಎಂದಿದ್ದಾರೆ.

‘ಕರ್ನಾಟಕ ಸರ್ಕಾರ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಮತ್ತು ಗೃಹ ಸಚಿವರು ಸುಳ್ಳು ಹೇಳುತ್ತಾ ಬಂದಿದ್ದಾರೆ. ಅದೇ ಸುಳ್ಳನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮುಂದೆಯೂ ಹೇಳಿದೆ. ಕೇಂದ್ರ ಸರ್ಕಾರದ ಅಡ್ವೋಕೇಟ್ ಜನರಲ್ ಅವರ ಹೇಳಿಕೆಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಸದ್ಯಕ್ಕೆ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡಿದೆ’ ಎಂದಿದ್ದಾರೆ.

‘ಬರ ಪರಿಹಾರ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ವಿರುದ್ಧದ ಬೀದಿಗಳಲ್ಲಿ ಮಾತ್ರವಲ್ಲ, ನ್ಯಾಯಾಲಯದಲ್ಲಿಯೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ಕೇಂದ್ರ ತಂಡವು ವರದಿ ಸಲ್ಲಿಸಿದ ಒಂದು ತಿಂಗಳೊಳಗೆ ಬರ ಪರಿಹಾರ ಬಿಡುಗಡೆಗೆ ಕೇಂದ್ರ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಈ ಅವಧಿಯು 2023ರ ಡಿಸೆಂಬರ್‌ಗೆ ಮುಗಿದಿದೆ. ಕೇಂದ್ರ ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಬೇಕು .
-ಕಪಿಲ್‌ ಸಿಬಲ್‌, ಕರ್ನಾಟಕ ಸರ್ಕಾರದ ಪರ ವಕೀಲ
ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅದರ ಬದಲು, ಕೇಂದ್ರ ಸರ್ಕಾರದ ಯಾರಾದರೂ ಅಧಿಕಾರಿಗಳೊಂದಿಗೆ ಒಂದು ಹಂತದವರೆಗೆ ಮಾತುಕತೆ ನಡೆಸಿದ್ದರೆ ಸಮಸ್ಯೆಯನ್ನು ಪರಿಹರಿಸಬಹುದಿತ್ತು.
-ತುಷಾರ್‌ ಮೆಹ್ತಾ, ಕೇಂದ್ರದ ಸಾಲಿಸಿಟರ್‌ ಜನರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT