ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ: ಒಬಿಸಿ ಮೀಸಲಾತಿ ಕಡಿತಗೊಳಿಸಿದ್ದ ಕಾಂಗ್ರೆಸ್- ನರೇಂದ್ರ ಮೋದಿ

Published 24 ಏಪ್ರಿಲ್ 2024, 16:27 IST
Last Updated 24 ಏಪ್ರಿಲ್ 2024, 16:27 IST
ಅಕ್ಷರ ಗಾತ್ರ

ಸಾಗರ್/ಸರ್ಗುಜಾ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಒಬಿಸಿಗಳ ಪಟ್ಟಿಯಲ್ಲೇ ಮುಸ್ಲಿಮರ ಜಾತಿಗಳಿಗೂ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಹಿಂದುಳಿದವರ ಮೀಸಲಾತಿಯನ್ನು ಕಡಿತಗೊಳಿಸಿತ್ತು. ಅದನ್ನು ದೇಶದಾದ್ಯಂತ ವಿಸ್ತರಿಸಲೂ ಯೋಜಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದರು.

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹೀಗೆ ಮಾಡುವ ಮೂಲಕ ಕಾಂಗ್ರೆಸ್ ಒಬಿಸಿ ಸಮುದಾಯದ ದೊಡ್ಡ ಪಾಲನ್ನು ಕಸಿದುಕೊಂಡಿತ್ತು. ನಿಮ್ಮ ಮುಂದಿನ ತಲೆಮಾರುಗಳನ್ನು ನಾಶ ಮಾಡುವ ಅಪಾಯಕಾರಿ ಆಟದಲ್ಲಿ ಕಾಂಗ್ರೆಸ್‌ ನಿರತವಾಗಿದೆ. ಅದು ಒಬಿಸಿಗಳ ದೊಡ್ಡ ಶತ್ರು’ ಎಂದು ದೂರಿದರು.

ಅದಕ್ಕೂ ಮುಂದೆ ಛತ್ತೀಸಗಢದ ಸರ್ಗುಜಾದಲ್ಲಿಯೂ ಪ್ರಧಾನಿ ಅವರು, ಕರ್ನಾಟಕದ ನಿದರ್ಶನವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು.

‘ಸುರ್ಗುಜಾದಲ್ಲಿ ನಾನು ನಿಮ್ಮ ಮುಂದೆ ಕಾಂಗ್ರೆಸ್‌ನ ಮುಸ್ಲಿಂ ಲೀಗ್ ಚಿಂತನೆಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ’ ಎಂದು ತಮ್ಮ ಹಿಂದಿನ ಆರೋಪವನ್ನು ಪುನರುಚ್ಚರಿಸಿದರು.

‘ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ಸಂವಿಧಾನದ ಕರಡನ್ನು ಸಿದ್ಧಪಡಿಸುವಾಗ ಬಾಬಾಸಾಹೇಬರ ನೇತೃತ್ವದಲ್ಲಿ ಬುದ್ಧಿಜೀವಿಗಳು ಮತ್ತು ದೇಶದ ಅತ್ಯುನ್ನತ ವ್ಯಕ್ತಿಗಳು ತೀರ್ಮಾನಿಸಿದ್ದರು’ ಎಂದ ಮೋದಿ, ‘ಮೀಸಲಾತಿ ಇರುವುದೇ ಆದರೆ, ಅದು ನನ್ನ ದಲಿತ ಸೋದರರು ಮತ್ತು ಸೋದರಿಯರಿಗೆ ಹಾಗೂ ಆದಿವಾಸಿ ಸೋದರ ಮತ್ತು ಸೋದರಿಯರಿಗೆ’ ಎಂದು ಹೇಳಿದರು.

‘ಮತಬ್ಯಾಂಕ್‌ಗಾಗಿ ಹಸಿದಿರುವ ಕಾಂಗ್ರೆಸ್ ಶ್ರೇಷ್ಠ ವ್ಯಕ್ತಿಗಳ ಮಾತುಗಳಿಗೆ, ಸಂವಿಧಾನದ ಪಾವಿತ್ರ್ಯತೆ ಮತ್ತು ಬಾಬಾಸಾಹೇಬರ ಮಾತುಗಳಿಗೆ ಎಂದೂ ಗಮನ ಕೊಡಲಿಲ್ಲ. ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಪ್ರಯತ್ನಿಸಿತ್ತು. ಅದನ್ನು ದೇಶದಾದ್ಯಂತ ಜಾರಿಗೆ ತರಲು ಯೋಜಿಸಿತ್ತು. ಧರ್ಮದ ಆಧಾರದಲ್ಲಿ ಶೇ 15ರಷ್ಟು ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ್ದ ಅವರು, ಅದಕ್ಕಾಗಿ ಎಸ್‌ಸಿ, ಎಸ್‌ಟಿ, ಆದಿವಾಸಿ ಮತ್ತು ಹಿಂದುಳಿದ ಜಾತಿಗಳ ಕೋಟಾವನ್ನು ಮೊಟಕುಗೊಳಿಸುವುದಾಗಿ ಹೇಳಿದ್ದರು’ ಎಂದು ಆರೋಪಿಸಿದರು.   

‘ಕಾಂಗ್ರೆಸ್ ಹಿಂದೆ ಕರ್ನಾಟಕದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವು ಸಂವಿಧಾನಕ್ಕೆ ಮತ್ತು ಬಾಬಾಸಾಹೇಬರ ಆಶಯಗಳಿಗೆ ವಿರುದ್ಧವಾಗಿದ್ದ ಅದನ್ನು ರದ್ದುಪಡಿಸಿದೆವು’ ಎಂದು ಪ್ರಧಾನಿ ತಿಳಿಸಿದರು.

‘ಸಾಮಾಜಿಕ ನ್ಯಾಯವನ್ನು ಅವಹೇಳನ ಮಾಡಿದ ಕಾಂಗ್ರೆಸ್, ಅದನ್ನು ಸಾಯಿಸಿತು. ಕರ್ನಾಟಕದಲ್ಲಿ ಜಾತ್ಯತೀತತೆಯನ್ನು ಕೊಂದು ಹಾಕಿತು. ಕರ್ನಾಟಕದ ಈ ಮಾದರಿಯನ್ನು ಕಾಂಗ್ರೆಸ್ ದೇಶದಾದ್ಯಂತ ಜಾರಿ ಮಾಡಲು ಹೊರಟಿದೆ. ಸಂವಿಧಾನವನ್ನು ಬದಲಾಯಿಸುವ ಮೂಲಕ ಎಸ್‌ಸಿ, ಎಸ್‌ಟಿ, ಒಬಿಸಿ ಹಕ್ಕುಗಳನ್ನು ತನ್ನ ಮತಬ್ಯಾಂಕ್‌ಗೆ ನೀಡಲು ಹೊರಟಿದೆ. ನಿಮ್ಮ ಮೀಸಲಾತಿಯನ್ನು ರಕ್ಷಿಸುವ ಯಾರಾದರೂ ಇದ್ದರೆ, ಅದು ಬಿಜೆಪಿ’ ಎಂದು ಪ್ರತಿಪಾದಿಸಿದರು.

‘ಜಾತಿ ಸಮೀಕ್ಷೆ ಮೂಲಕ ಮೀಸಲಾತಿ ಕಸಿಯುವ ಯತ್ನ’

ಕಾಂಗ್ರೆಸ್ ಪಕ್ಷವು ಜಾತಿ ಸಮೀಕ್ಷೆಯ ಮೂಲಕ ಎಸ್‌ಸಿ ಎಸ್‌ಟಿ ಮತ್ತು ಹಿಂದುಳಿದ ಜಾತಿಗಳ ಹಕ್ಕುಗಳನ್ನು ಕಸಿಯಲು ಹೊರಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬುಧವಾರ ಆರೋಪಿಸಿದರು. 

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ಜಾತಿ ಸಮೀಕ್ಷೆಯ ಮೂಲಕ ದೇಶದ ಸಾಮಾಜಿಕ ರಚನೆಯನ್ನು ಹಾಳು ಮಾಡಲಿವೆ ಎಂದು ವಾಗ್ದಾಳಿ ನಡೆಸಿದರು. ‘ತಾನು ಅಧಿಕಾರಕ್ಕೆ ಬಂದರೆ ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಷರಿಯಾ ಕಾನೂನನ್ನು ಜಾರಿಗೆ ತರುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ’ ಎಂದು ಹೇಳಿದರು. ‘ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರ ಸಮಿತಿಯ ಶಿಫಾರಸುಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದರಿಂದ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಂಡವು. ಅದರ ಅಡಿಯಲ್ಲಿ ಎಸ್‌ಸಿ ಎಸ್‌ಟಿ ಹಿಂದುಳಿದ ಜಾತಿಗಳಿಗೆ ನೀಡಲಾಗಿದ್ದ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನಗಳು ಆರಂಭವಾದವು’ ಎಂದು ಆರೋಪಿಸಿದರು.

‘ಸಾಚಾರ್ ಸಮಿತಿಯ ವರದಿಯಲ್ಲೂ ಎಸ್‌ಸಿ ಎಸ್‌ಟಿ ಹಿಂದುಳಿದ ವರ್ಗಗಳ ಮೀಸಲಾತಿಯೊಳಗೆ ನುಸುಳಿ ಅದರ ಒಂದು ಭಾಗವನ್ನು ಮುಸ್ಲಿಮರಿಗೆ ನೀಡುವ ದುರುದ್ದೇಶಪೂರಿತ ಪ್ರಯತ್ನ ನಡೆದಿತ್ತು. ಆಗ ಅದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT