ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾಚಲ ಸರ್ಕಾರ ಅಪಾಯದಲ್ಲಿಲ್ಲ: ಕಾಂಗ್ರೆಸ್‌

ಎಐಸಿಸಿ ನಾಯಕರನ್ನು ಭೇಟಿಯಾದ ವಿಕ್ರಮಾದಿತ್ಯ ಸಿಂಗ್‌
Published 4 ಮಾರ್ಚ್ 2024, 14:59 IST
Last Updated 4 ಮಾರ್ಚ್ 2024, 14:59 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರವು ಅಪಾಯದಲ್ಲಿಲ್ಲ. ಅದು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಪುತ್ರ ಹಾಗೂ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರು ಎಐಸಿಸಿ ನಾಯಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದೂ ಹೇಳಿವೆ.

ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಅವರ ಮೇಲೆ ಎಐಸಿಸಿಗೆ ನಂಬಿಕೆ ಇದೆ. ನಾಯಕತ್ವ ಬದಲಾವಣೆ ಸದ್ಯಕ್ಕೆ ಅಸಂಭವ ಎಂದು ವಿವರಿಸಿವೆ.

‘ಸರ್ಕಾರಕ್ಕೆ ಬಹುಮತವಿದ್ದು, ಅದು ಹಿಮಾಚಲ ಪ್ರದೇಶದ ಜನರಿಗಾಗಿ ಕಾರ್ಯನಿರ್ವಹಿಸಲಿದೆ. ಹಣ ಮತ್ತು ಅಧಿಕಾರವನ್ನು ಉಪಯೋಗಿಸಿ ಪತನಗೊಳಿಸಲು ಸಾಧ್ಯವಾಗದು’ ಎಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪಕ್ಷಾಂತರದ ರಾಜಕಾರಣ ಹಿಮಾಚಲದ ಜನರಿಗೆ ಇಷ್ಟವಿಲ್ಲ ಎಂದೂ ಹೇಳಿವೆ. 

ಸರ್ಕಾರದ ಸ್ಥಿರತೆ: ಪ್ರತಿಕ್ರಿಯಿಸದ ಸುಖು

ಹಿಮಾಚಲ ಪ್ರದೇಶ ಸರ್ಕಾರದ ಸ್ಥಿರತೆ ಬಗ್ಗೆ ಪ್ರತಿಕ್ರಿಯಿಸಲು ಸುಖ್ವಿಂದರ್‌ ಸಿಂಗ್ ಸುಖು ಸೋಮವಾರ ನಿರಾಕರಿಸಿ‌ದರು.

ಸರ್ಕಾರವು ಶೀಘ್ರ ಪತನಗೊಳ್ಳಲಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿಕೆ ನೀಡಿರುವುದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಕುರಿತು ಬಿಜೆಪಿ ನಾಯಕರನ್ನೇ ಕೇಳಿ’ ಎಂದರು.

ಮುಂದಿನ ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು, ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿರಿ ಎಂದು ವಿರೋಧ ಪಕ್ಷದ ನಾಯಕ ಜೈರಾಮ್‌ ಠಾಕೂರ್‌ ಅವರು ಭಾನುವಾರ ಹೇಳಿದ್ದರು.

ಶಾಸಕರ ವಿರುದ್ಧದ ಕ್ರಮ ಸಮರ್ಥನೀಯವಲ್ಲ: ಬಿಂದಾಲ್‌
ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್‌ ಅವರ ಪರವಾಗಿ ಮತಚಲಾಯಿಸಿದ್ದ ಕಾಂಗ್ರೆಸ್‌ನ ಬಂಡಾಯ ಶಾಸಕರು ಮತ್ತು ಪಕ್ಷೇತರ ಶಾಸಕರ ವಿರುದ್ಧ ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ಬಳಸಿ ಕ್ರಮ ಕೈಗೊಂಡಿರುವುದು ಖಂಡನೀಯ ಎಂದು ಬಿಜೆಪಿ ಹಿಮಾಚಲ ಪ್ರದೇಶ ಘಟಕದ ಅಧ್ಯಕ್ಷ ರಾಜೀವ್‌ ಬಿಂದಾಲ್‌ ಅವರು ಸೋಮವಾರ ಹೇಳಿದರು. ಕಾಂಗ್ರೆಸ್‌ ಸರ್ವಾಧಿಕಾರಿ ನಿರ್ಧಾರವನ್ನು ಕೈಗೊಂಡಿದೆ ಎಂದೂ ಅವರು ಆರೋಪಿಸಿದರು. ಬಂಡಾಯ ಶಾಸಕರ ಮನೆಗಳು ಮತ್ತು ಸಂಸ್ಥೆಗಳಲ್ಲಿ ಶೋಧ ಕಾರ್ಯ ನಡೆಸುವ ಮೂಲಕ ಭಯದ ವಾತಾವರಣ ನಿರ್ಮಿಸಲಾಗಿದೆ ಇದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಜೆಪಿಯ 15 ಮಂದಿ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗಿದೆ ಎಂದೂ ಆರೋಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT