ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ವಿರುದ್ಧ ಕ್ರಮಕ್ಕೆ CWC ಅಸಮಾಧಾನ | BJP ವಿರುದ್ಧ ‘ಇಂಡಿಯಾ’ ಕೋಟೆ: ನಿರ್ಣಯ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ‘ಇಂಡಿಯಾ’ ಮೈತ್ರಿಕೂಟವನ್ನು ರಕ್ಷಣಾ ಕೋಟೆಯಂತೆ ನಿಲ್ಲಿಸಲು ಕಾಂಗ್ರೆಸ್‌ ಬದ್ಧವಾಗಿದೆ ಎಂಬ ನಿರ್ಣಯವನ್ನು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಅವಿರೋಧವಾಗಿ ತೆಗೆದುಕೊಳ್ಳಲಾಯಿತು. 

‘ಇಂಡಿಯಾ’ ಮೈತ್ರಿಕೂಟದ ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಿರುವ ಕ್ರಮವನ್ನು ಕಟು ಶಬ್ದಗಳಿಂದ ಖಂಡಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ನಾಲ್ಕು ಗಂಟೆ ಕಾಲ ಈ ಸಭೆ ನಡೆಯಿತು.

ಸಂಸತ್‌ನ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೆ ನೀಡುವಂತೆ ವಿಪಕ್ಷಗಳ ಸಂಸದರು ಆಗ್ರಹಿಸಿದ್ದರು. ಇದಕ್ಕಾಗಿ ಸಂಸದರನ್ನು ಅಮಾನತಿನಲ್ಲಿ ಇರಿಸಲಾಗಿದೆ. ಸಂಸದರು ಅಮಾನತಿನಲ್ಲಿರುವ ಕಾರಣ ಕೇಂದ್ರ ಸರ್ಕಾರದ ಮೂರು ಕರಾಳ ಮಸೂದೆಗಳ ಅಂಗೀಕಾರಕ್ಕೆ ಸವಾಲು ಒಡ್ಡಲು ವಿಪಕ್ಷಗಳಿಗೆ ಸಾಧ್ಯವಾಗಲಿಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿದೆ. 

ಸ್ವತಂತ್ರ ಪಕ್ಷವಾಗಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷವಾಗಿ ಲೋಕಸಭೆ ಚುನಾವಣೆಯಲ್ಲಿ ಹೋರಾಡಲು ಕಾಂಗ್ರೆಸ್‌ ಸಂಪೂರ್ಣವಾಗಿ ಸಿದ್ಧವಾಗಬೇಕು ಎಂದು ನಿರ್ಣಯ ಹೇಳಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಪಕ್ಷದ 76 ನಾಯಕರು ಸಭೆಯಲ್ಲಿದ್ದರು.

‘ಪಾಠ ಕಲಿತಿದೆ’: ‘ಈಚೆಗೆ ನಡೆದ ವಿಧಾನಸಭೆ ಚುನಾವಣೆಗಳ ಫಲಿತಾಂಶ ದಿಂದ ಕಾಂಗ್ರೆಸ್‌ ಪಾಠ ಕಲಿತಿದೆ. ಹಿಂದೆ ಎಸಗಿರುವ ತಪ್ಪುಗಳನ್ನು ಪುನರಾವರ್ತನೆ ಮಾಡದಂತೆ ಪಕ್ಷವು ಬದ್ಧವಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿ ಹೇಳಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಕಾರಣವೇನೆಂಬ ಕುರಿತು ವಿಶ್ಲೇಷಿಸಲಾಗಿದೆ. ಈ ರಾಜ್ಯಗಳಲ್ಲಿ ಮತಹಂಚಿಕೆ ಪ್ರಮಾಣವು ನಮಗೆ ಆಶಾದಾಯಕವಾಗಿದೆ. ಹೆಚ್ಚಿನ ಗಮನ ನೀಡಿದರೆ ಪರಿಸ್ಥಿತಿಯನ್ನು ಅನುಕೂಲವಾಗುವಂತೆ ಬದಲಿಸಬಹುದು ಎಂದು ಮತಹಂಚಿಕೆಯಿಂದ ತಿಳಿಯುತ್ತದೆ’ ಎಂದರು.

ರಾಹುಲ್‌ ಅವರು ಭಾರತ ಜೋಡೊ ಯಾತ್ರೆ–2 ಕೈಗೊಳ್ಳಬೇಕು ಎಂದು ಹಲವು ನಾಯಕರು ಬಯಸುತ್ತಿದ್ದಾರೆ. ಆದರೆ ಈ ನಿರ್ಧಾರವು ರಾಹುಲ್‌ ಮತ್ತು ಸಿಡಬ್ಲ್ಯುಸಿಗೆ ಬಿಟ್ಟದ್ದು’ ಎಂದರು.

ಚುನಾವಣಾ ಮನಸ್ಥಿತಿಗೆ ಕಾಂಗ್ರೆಸ್‌

ತಡ ಮಾಡದೇ ಕಾಂಗ್ರೆಸ್‌ ಚುನಾವಣಾ ಮನಸ್ಥಿತಿಗೆ ಜಾರಲಿದೆ. ಈ ತಿಂಗಳೇ ಸ್ಕ್ರೀನಿಂಗ್‌ ಸಮಿತಿಯನ್ನು ರಚಿಸಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ಸಿಡಬ್ಲ್ಯುಸಿ ಸಭೆ ಬಳಿಕ ಹೇಳಿ ದರು. ಪ್ರಣಾಳಿಕೆ ಸಮಿತಿಯನ್ನು ಶೀಘ್ರವೇ ಘೋಷಿಸಲಾಗುವುದು ಎಂದರು.

ಲೋಕಸಭೆ ಚುನಾವಣೆ ದೂರವಿಲ್ಲದ ಕಾರಣ ನಮ್ಮ ಬಳಿ ಹೆಚ್ಚಿನ ಸಮಯವಿಲ್ಲ. ಹಾಗಾಗಿ ಕಾರ್ಯರೂಪಕ್ಕೆ ತರಬಹುದಾದ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಬೇಕು.
–ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT