ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಕಟ್ಟುವ ಹೊಣೆ ರಾಹುಲ್‌ಗೆ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ l 200ಕ್ಕೂ ಹೆಚ್ಚು ಮುಖಂಡರು ಭಾಗಿ
Last Updated 22 ಜುಲೈ 2018, 19:42 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕಾಗಿ ಮೈತ್ರಿಕೂಟ ರಚಿಸುವ ಹೊಣೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಪಕ್ಷವು ಭಾನುವಾರ ವಹಿಸಿದೆ.

ರಾಹುಲ್‌ ಅವರು ಪಕ್ಷದ ಅಧ್ಯಕ್ಷರಾದ ಮೇಲೆ ನಡೆದ ಮೊದಲ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಸ್ತೃತ ಸಿಡಬ್ಲ್ಯುಸಿ ಸಭೆಯಲ್ಲಿ 200ಕ್ಕೂ ಹೆಚ್ಚು ಮುಖಂಡರು ಭಾಗವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ನೇತೃತ್ವವನ್ನು ರಾಹುಲ್‌ ಅವರೇ ವಹಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಮೈತ್ರಿಕೂಟವನ್ನು ಕಾರ್ಯರೂಪಕ್ಕೆ ತರಲು ನಾವು ಬದ್ಧರಾಗಿದ್ದೇವೆ. ಈ ಕೆಲಸದಲ್ಲಿ ರಾಹುಲ್‌ ಬೆನ್ನಿಗೆ ನಿಲ್ಲುತ್ತೇವೆ’ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಲು ಮುಂದಾಗಿರುವ ಅಪಾಯಕಾರಿ ಆಡಳಿತದಿಂದ ಜನರನ್ನು
ರಕ್ಷಿಸಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಮಿತಿ ರಚನೆ, ಚುನಾವಣೆಗೆ ಮೊದಲು ಮತ್ತು ನಂತರದ ಮೈತ್ರಿ ನಿರ್ಧಾರದ ಎಲ್ಲ ಅಧಿಕಾರವನ್ನು ರಾಹುಲ್‌ ಅವರಿಗೆ ನೀಡಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌ ಅವರು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿತಾಸಕ್ತಿಯನ್ನು ಬಲಿಗೊಡದೆ ಮೈತ್ರಿ ರಚಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗುವುದು ಎಂದು ರಾಹುಲ್‌ ಹೇಳಿದ್ದಾರೆ.

150 ಸ್ಥಾನ
ಹಿರಿಯ ಮುಖಂಡ ಪಿ. ಚಿದಂಬರಂ ಅವರು ಸಭೆಯಲ್ಲಿ ಕಾಂಗ್ರೆಸ್‌ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಷಯ ಮಂಡಿಸಿದರು. 12 ರಾಜ್ಯಗಳಲ್ಲಿ ಪಕ್ಷವು ಬಲವಾದ ಸಂಘಟನೆಯನ್ನು ಹೊಂದಿದೆ. ಇಲ್ಲಿ 150 ಸ್ಥಾನಗಳನ್ನು ಗೆಲ್ಲಬಹುದು. ಉಳಿದ ರಾಜ್ಯಗಳಲ್ಲಿ ಸೂಕ್ತ ರೀತಿಯ ಮೈತ್ರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಜನ ಅಪ್ಪಿಕೊಳ್ಳಲ್ಲ’
ರಾಹುಲ್‌ ಗಾಂಧಿಯವರು ಪ್ರಧಾನಿ ಮೋದಿಯನ್ನು ಬಲವಂತವಾಗಿ ಅಪ್ಪಿಕೊಳ್ಳಬಹುದು. ಆದರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ರಾಹುಲ್‌ ಅವರನ್ನು ಅಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್‌ ಬಲೂನಿ ಹೇಳಿದ್ದಾರೆ.

ಸಿಡಬ್ಲ್ಯುಸಿ ಸಭೆಯಲ್ಲಿ ಮೋದಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಡೆಸಿರುವ ವಾಗ್ದಾಳಿಗೂ ಅನಿಲ್ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ರಾಹುಲ್‌ ಪ್ರಶಂಸೆ
ನವದೆಹಲಿ (ಪಿಟಿಐ):
ಕರ್ನಾಟಕದಲ್ಲಿ ದೃಷ್ಟಿದೋಷವುಳ್ಳ ಮತದಾರರಿಗೆ ಬ್ರೈಲ್ ಎಪಿಕ್‌ ಕಾರ್ಡ್‌ (ಮತದಾರರ ಗುರುತಿನ ಚೀಟಿ) ನೀಡಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಇರುವ ಎಲ್ಲ ಅಂಧ ಮತದಾರರಿಗೂ ಮತದಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಬ್ರೈಲ್‌ ಎಪಿಕ್‌ ಕಾರ್ಡ್‌ ವಿತರಿಸಬೇಕು ಎಂದು ಅವರು ಆಯೋಗವನ್ನು ಒತ್ತಾಯಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ರಾಹುಲ್‌, ‘ಅಂಗವಿಕಲರು ಮತದಾನ ಪ್ರಕ್ರಿಯೆಯಲ್ಲಿ ಸುಲಭವಾಗಿ ಪಾಲ್ಗೊಳ್ಳುವಂತೆ ಮಾಡಲು ಆಯೋಗ ಇನ್ನಷ್ಟು ಕ್ರಮ ತೆಗೆದುಕೊಳ್ಳಲಿದೆ ಎನ್ನುವ ವಿಶ್ವಾಸ ನನಗಿದೆ. ಈಗ ತೆಗೆದುಕೊಂಡಿರುವ ಎಲ್ಲ ಕ್ರಮಗಳಿಗೂ ಕಾಂಗ್ರೆಸ್‌ ಪಕ್ಷ ಹೃತ್ಪೂರ್ವಕ ಬೆಂಬಲ ನೀಡಲಿದೆ‘ ಎಂದು ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಚುನಾವಣಾ ಆಯೋಗ ಅತ್ಯದ್ಭುತ ಕ್ರಮ ತೆಗೆದುಕೊಂಡಿದೆ. ಇದನ್ನು ಪ್ರಶಂಸಿಸಿ ಈ ಪತ್ರ ಬರೆಯುತ್ತಿದ್ದೇನೆ. ದೃಷ್ಟಿದೋಷವುಳ್ಳ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಮಾಡಲು ಬ್ರೈಲ್‌ ಎಪಿಕ್‌ ಕಾರ್ಡ್‌ ಒದಗಿಸುವ ಮೂಲಕ ಆಯೋಗವು ಸರಿಯಾದ ಹೆಜ್ಜೆ ಇಟ್ಟಿದೆ. ಇದರಿಂದ ಎಲ್ಲ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ’ ಎಂದು ತಿಳಿಸಿದ್ದಾರೆ.

ರಾಜ್ಯ ನಾಯಕರಿಂದ ಇಂದು ರಾಹುಲ್‌ ಭೇಟಿ
ನವದೆಹಲಿ:
ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಕ್ಷದ ಮುಖ್ಯಸ್ಥ ರಾಹುಲ್‌ ಗಾಂಧಿಯವರನ್ನುಸೋಮವಾರ ಇಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಈ ಇಬ್ಬರು ನಾಯಕರು, ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ರಾಹುಲ್‌ ಜತೆ ಚರ್ಚಿಸಲಿದ್ದಾರೆ.

ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಬಗ್ಗೆಯೂ ರಾಹುಲ್‌ ಅವರಿಗೆ ಈ ನಾಯಕರು ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ನಾಯಕರು ನಡೆಸಿದ ಸಭೆಯಲ್ಲಿ ಮಾಜಿ ಶಾಸಕರು ಹಾಗೂ ಬಹಳಷ್ಟು ಮುಖಂಡರು ಸದ್ಯದ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

*
ಇತರ ಪಕ್ಷಗಳ ಜತೆಗೆ ಸೇರಿ ಚುನಾವಣೆ ಗೆಲ್ಲಬಹುದು. ಅದರ ಬಳಿಕ ಬಿಜೆಪಿ ,ಆರ್‌ಎಸ್‌ಎಸ್‌ ಸೇರಿ ಭಾರತದ ಸಂಸ್ಥೆಗಳಿಗೆ ಮಾಡಿರುವ ಹಾನಿಯನ್ನು ಸರಿಪಡಿಸಬೇಕು.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*
ಹತಾಶ ಕಾಂಗ್ರೆಸ್‌ ಲೋಕಸಭೆಯ 150 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿ ಹಾಕಿಕೊಂಡಿದೆ. ಆದರೆ ರಾಹುಲ್‌ ಪ್ರಧಾನಿ ಕನಸು ಕಾಣುತ್ತಿದ್ದಾರೆ.
-ಅನಿಲ್‌ ಬಲೂನಿ, ಬಿಜೆಪಿ ಮಾಧ್ಯಮ ವಿಭಾಗದ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT