ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್‌ನದ್ದೂ ಸಮಾನ ಪಾತ್ರವಿದೆ: ಒವೈಸಿ

Last Updated 5 ಆಗಸ್ಟ್ 2020, 11:57 IST
ಅಕ್ಷರ ಗಾತ್ರ

ಹೈದರಾಬಾದ್‌: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್‌ ಕೂಡ ಸಮಾನ ಪಾತ್ರ ಹೊಂದಿದೆ ಎಂದು ಎಐಎಂಐಎಂನ ವರಿಷ್ಠ, ಸಂಸದ ಅಸಾದುದ್ದೀನ್‌ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ಮಾತನಾಡಿರುವ ಅವರು, ‘ಇಂದು ತಾವು ಭಾವುಕರಾಗಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಾನೂ ಭಾವುಕನಾದೆ. ಸಹಬಾಳ್ವೆ ಮತ್ತು ಪೌರತ್ವದ ಸಮಾನತೆಯನ್ನು ನಂಬಿದವನಾಗಿ ನಾನು ಕೂಡ ಅಷ್ಟೇ ಭಾವುಕನಾಗಿದ್ದೇನೆ. ಪ್ರಧಾನ ಮಂತ್ರಿಗಳೇ 450 ವರ್ಷಗಳಿಂದ ಅಲ್ಲಿ ಮಸೀದಿ ಇತ್ತು. ಹೀಗಾಗಿ ನಾನೂ ಭಾವುಕನಾಗಿದ್ದೇನೆ,’ ಎಂದು ಒವೈಸಿ ಹೇಳಿದರು.

‘ಬಾಬರಿ ಮಸೀದಿ ಧ್ವಂಸ ಮಾಡುವುದರಲ್ಲಿ ಕಾಂಗ್ರೆಸ್‌ನದ್ದೂ ಸಮಾನ ಪಾತ್ರವಿದೆ. ಕಾಂಗ್ರೆಸ್‌ ಸೇರಿದಂತೆ ಭಾರತದ ಎಲ್ಲ ಜಾತ್ಯತೀತ ಪಕ್ಷಗಳಿಗೆ ನನ್ನದೊಂದು ಪ್ರಶ್ನೆ. ರಾಮ ಮಂದಿರ ನಿರ್ಮಾಣ ಮಾಡಿದ್ದು ಜಾತ್ಯತೀತ ನಡೆಯೇ? ಇದು ಸೋದರತೆಯನ್ನು ಸಾರುತ್ತದೆಯೇ? ಅಲ್ಲಿದ್ದ ಮಸೀದಿಯನ್ನು ಧ್ವಂಸ ಮಾಡಲಾಯಿತು. ಸಾವಿರಾರು ಮಂದಿ ಹತರಾದರು. ಇದು ಸಹಬಾಳ್ವೆಯೇ? ಜಾತ್ಯತೀತ ಪಕ್ಷಗಳು ಈ ವಿಚಾರದಲ್ಲಿ ಸಂಪೂರ್ಣ ಬೆತ್ತಲಾಗಿವೆ,’ ಎಂದು ಅಸಾದುದ್ದೀನ್‌ ಒವೈಸಿ ಹೇಳಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

‘ಭೂಮಿ ಪೂಜೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದರ ಅರ್ಥವೇನು? ಇಂದು ಹೊಸ ಭಾರತದ ಉದಯವಾಗಿದೆ ಎಂದು ಅವರು ಹೇಳಿದ್ದಾರೆ. ಅದು ಏನನ್ನು ಸೂಚಿಸುತ್ತಿದೆ? ಅವರು ಹಿಂದೂ ರಾಷ್ಟ್ರವನ್ನು ಕಟ್ಟಲು ಹೊರಟಿದ್ದಾರೆ ಎಂಬುದಲ್ಲವೇ? ಅಲ್ಲಿ ಮುಸ್ಲಿಮರನ್ನು 2 ನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತದೆಯಲ್ಲವೇ? ಎಂದೂ ಅವರು ಪ್ರಶ್ನಿಸಿದ್ದಾಗಿ ವರದಿಯಾಗಿದೆ.

‘ಭಾರತ ಜಾತ್ಯತೀತ ರಾಷ್ಟ್ರ. ರಾಮ ಮಂದಿರಕ್ಕೆ ಭೂಮಿ ಪೂಜೆ ಮಾಡುವ ಮೂಲಕ ಪ್ರಧಾನ ಮಂತ್ರಿ ತಮ್ಮ ಮಾಣವಚನದ ಉಲ್ಲಂಘನೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆಯ ಸೋಲಿನ ದಿನ. ಹಿಂದುತ್ವದ ಗೆಲುವಿನ ದಿನ,’ ಎಂದು ಒವೈಸಿ ಹೇಳಿರುವುದಾಗಿ ಸುದ್ದಿ ಸಂಸ್ತೆ ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT