ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋನಿಯಾ ಸೇರಿ 41 ಮಂದಿ ಅವಿರೋಧ ಆಯ್ಕೆ

ರಾಜ್ಯಸಭೆ ಚುನಾವಣೆ: ಕರ್ನಾಟಕ ಸೇರಿ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿರುವ ಮೂರು ರಾಜ್ಯಗಳಲ್ಲಿ 27ಕ್ಕೆ ಮತದಾನ
Published 20 ಫೆಬ್ರುವರಿ 2024, 16:25 IST
Last Updated 20 ಫೆಬ್ರುವರಿ 2024, 16:25 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌, ಎಲ್‌.ಮುರುಗನ್ ಸೇರಿದಂತೆ 41 ಜನರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರಗಳ ವಾಪಸಾತಿಗೆ ಮಂಗಳವಾರ ಕಡೆಯ ದಿನವಾಗಿತ್ತು. ಚುನಾವಣೆ ನಡೆದ ಸ್ಥಾನಗಳಷ್ಟೇ ಅಭ್ಯರ್ಥಿಗಳು ಕಣದಲ್ಲಿದ್ದ ರಾಜ್ಯಗಳಲ್ಲಿ ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. ಉಳಿದಂತೆ, ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿರುವ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಫೆ. 27ರಂದು ಚುನಾವಣೆ ನಡೆಯಲಿದೆ.

ಈ ಮೂರು ರಾಜ್ಯಗಳಿಂದ ರಾಜ್ಯಸಭೆಯ ಒಟ್ಟು 15 ಸ್ಥಾನಗಳಿಗೆ ಫೆಬ್ರುವರಿ 27ರಂದು ಮತದಾನ ನಡೆಯಲಿದೆ. ಏಪ್ರಿಲ್‌ ಮೊದಲ ವಾರ ತೆರವಾಗಲಿರುವ 56 ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿತ್ತು.

ಉತ್ತರ ಪ್ರದೇಶದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಇಲ್ಲಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಂತೆಯೇ, ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕ್ರಮವಾಗಿ ಜೆಡಿಎಸ್‌ ಮತ್ತು ಬಿಜೆಪಿ ಇಲ್ಲಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹೀಗಾಗಿ, ಚುನಾವಣೆ ಕುತೂಹಲ ಕೆರಳಿಸಿದೆ.

ಇದುವರೆಗೂ ಬಿಜೆಪಿಯು 20 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್‌ 6, ತೃಣಮೂಲ ಕಾಂಗ್ರೆಸ್‌ 4, ವೈಎಸ್‌ಆರ್‌ ಕಾಂಗ್ರೆಸ್‌ 3, ಆರ್‌ಜೆಡಿ 2, ಎನ್‌ಸಿಪಿ, ಶಿವಸೇನೆ, ಬಿಆರ್‌ಎಸ್‌, ಜೆಡಿಯು ತಲಾ ಒಂದು ಸ್ಥಾನ ಗೆದ್ದುಕೊಂಡಿವೆ. ಒಟ್ಟಾರೆಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎ 29 ಸ್ಥಾನ, ‘ಇಂಡಿಯಾ’ ಮೈತ್ರಿಕೂಟ 12 ಸ್ಥಾನ ಗೆದ್ದುಕೊಂಡಂತಾಗಿದೆ. 

ರಾಜ್ಯಸಭೆಯ ಅವಧಿ ಅಂತ್ಯವಾಗಲಿರುವ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್‌, ಮನ್‌ಸುಖ್‌ ಮಾಂಡವೀಯ, ರಾಜೀವ್‌ ಚಂದ್ರಶೇಖರ್, ಪುರುಷೋತ್ತಮ ರೂಪಾಲಾ ಅವರಿಗೆ ಬಿಜೆಪಿ ಈ ಚುನಾವಣೆಗೆ ಟಿಕೆಟ್ ನಿರಾಕರಿಸಿತ್ತು. ಇವರಲ್ಲಿ ಹೆಚ್ಚಿನವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುವ ಇರಾದೆ ಪಕ್ಷದ್ದಾಗಿದೆ ಎಂದು ಹೇಳಲಾಗಿದೆ.

ರಾಜಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಈ ಮೂಲಕ, ಲೋಕಸಭೆಯ ಸದಸ್ಯೆಯಾಗಿ 25 ವರ್ಷಗಳ ಪಯಣವನ್ನು ಅಂತ್ಯಗೊಳಿಸಲಿದ್ದಾರೆ. ಬಿಜೆಪಿಯ ಮದನ್‌ ರಾಠೋಡ್ ಮತ್ತು ಚುನ್ನಿ ಲಾಲ್‌ ಗರಾಸಿಯಾ ಅವರು ಇದೇ ಮೊದಲಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಾರಿ ಗುಜರಾತ್‌ನಿಂದ ಅವಿರೋಧವಾಗಿ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. ಇವರೊಂದಿಗೆ ಜಸ್ವಂತ್ ಸಿನ್ಹಾ ಪಾರ್ಮರ್, ಮಯಂಕ್ ನಾಯಕ್‌ ಮತ್ತು ಗೋವಿಂದ್‌ ಢೋಲಕಿಯ ಅವರು ಆಯ್ಕೆಯಾದರು. ನಡ್ಡಾ ಹಿಂದೆ ಹಿಮಾಚಲಪ್ರದೇಶದಿಂದ ಆಯ್ಕೆಯಾಗಿದ್ದರು. ಅಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಪುನರಾಯ್ಕೆ ಅಸಾಧ್ಯವಾಗಿತ್ತು.

ಗುಜರಾತ್‌ನಲ್ಲಿ ಎಲ್ಲ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ವಿಧಾನಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಕಾಂಗ್ರೆಸ್‌ ತನ್ನ ಹಾಲಿ ಸದಸ್ಯರ ಸ್ಥಾನವನ್ನು ಕಳೆದುಕೊಂಡಿದೆ. 

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಒಡಿಶಾದಿಂದ, ಬಿಜೆಪಿಗೆ ಅಗತ್ಯ ಸದಸ್ಯ ಬಲವಿಲ್ಲದಿದ್ದರೂ ಅವಿರೋಧವಾಗಿ ಆಯ್ಕೆಯಾದರು. ಇಲ್ಲಿ ಬಿಜೆಡಿ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸದಿರುವುದು ಅವರಿಗೆ ವರದಾನಾಯಿತು. ಇವರೊಂದಿಗೆ ಬಿಜೆಡಿಯ ದೇಬಶೀಶ್‌ ಸಮಂಟ್ರಿ ಮತ್ತು ಸುಭಾಶಿಶ್‌ ಖುಂಟಿಯಾ ಅವರೂ ಅವಿರೋಧವಾಗಿ ಆಯ್ಕೆಗೊಂಡರು.

ಹಲವು ಪಕ್ಷಾಂತರ ಬೆಳವಣಿಗೆಗೆ ಸಾಕ್ಷಿಯಾದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಾಜಿ ನಾಯಕ, ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಅಶೋಕ್‌ ಚವಾಣ್ ಮತ್ತು ಮಿಲಿಂದ್ ದೇವುರಾ ಅವರು ಕ್ರಮವಾಗಿ ಬಿಜೆಪಿ ಮತ್ತು ಶಿವಸೇನೆ ಅಭ್ಯರ್ಥಿಗಳಾಗಿ ರಾಜ್ಯಸಭೆಗೆ ಆಯ್ಕೆಯಾದರು. ಇವರೊಂದಿಗೆ ಎನ್‌ಸಿಪಿಯ ಪ್ರಫುಲ್ ಪಟೇಲ್, ಬಿಜೆಪಿ ಅಭ್ಯರ್ಥಿಗಳಾದ ಮೇಧಾ ಕುಲಕರ್ಣಿ, ಅಜಿತ್ ಘೋಪ್ಛಡೆ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.

ಪಶ್ಚಿಮ ಬಂಗಾಳದಲ್ಲಿ ಪತ್ರಕರ್ತೆ ಸಾಗರಿಕಾ ಘೋಷ್‌ ಸೇರಿದಂತೆ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಲ್ವರು ಹಾಗೂ ಬಿಜೆಪಿಯ ಒಬ್ಬರು ಆಯ್ಕೆಯಾದರು. ಸದಸ್ಯ ಬಲವಿಲ್ಲದ ಕಾಂಗ್ರೆಸ್‌ ರಾಜ್ಯದಲ್ಲಿ ಒಂದು ಸ್ಥಾನ ಕಳೆದುಕೊಂಡಿತು.

ನೆರೆಯ ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಎಲ್ಲ ಮೂರು ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ತೆಲಂಗಾಣದಲ್ಲಿ ಈಚೆಗೆ ಅಧಿಕಾರ ಕಳೆದುಕೊಂಡ ಬಿಆರ್‌ಎಸ್‌, ರಾಜ್ಯಸಭೆ ಚುನಾವಣೆಯಲ್ಲಿ ಎರಡು ಹಾಲಿ ಸ್ಥಾನ ಕಳೆದುಕೊಂಡಿತು. ಕಾಂಗ್ರೆಸ್‌ನ ರೇಣುಕಾ ಚೌಧರಿ, ಅನಿಲ್‌ಕುಮಾರ್ ಯಾದವ್ ಈ ಸ್ಥಾನ ಗೆದ್ದರು. ಇಲ್ಲಿ ಬಿಆರ್‌ಎಸ್‌ ಒಂದು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಸಾಗರಿಕಾ ಘೋಷ್
ಸಾಗರಿಕಾ ಘೋಷ್
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT