ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರಪಕ್ಷಗಳನ್ನು ಬಳಸಿ ಬಿಸಾಡುವುದು ಕಾಂಗ್ರೆಸ್‌ ಉದ್ದೇಶ: ಮೋದಿ ವಾಗ್ದಾಳಿ

ಆಂಧ್ರಪ್ರದೇಶದಲ್ಲಿ ನಡೆದ ಎನ್‌ಡಿಎ ರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಅಮರಾವತಿ: ‘ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್ಲಾ ಸದಸ್ಯಪಕ್ಷಗಳನ್ನು ಬಿಜೆಪಿಯು ತನ್ನೊಟ್ಟಿಗೆ ಕರೆದೊಯ್ಯುತ್ತದೆ. ಆದರೆ, ತನ್ನ ಮಿತ್ರಪಕ್ಷಗಳನ್ನು ಬಳಸಿಕೊಂಡು ಬಿಸಾಡುವುದು ಕಾಂಗ್ರೆಸ್‌ನ ಕಾರ್ಯಸೂಚಿ’

– ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಬೊಪ್ಪುಡಿ ಗ್ರಾಮದಲ್ಲಿ ಭಾನುವಾರ ಹೇಳಿದರು.

ತನ್ನ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ ಜೊತೆ ಸೇರಿ ಬಿಜೆಪಿ ಇಲ್ಲಿ ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಅವರು ಭಾಗಿಯಾಗಿದ್ದರು. ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಮತ್ತು ಕಾಂಗ್ರೆಸ್‌ ಎರಡೂ ಒಂದೇ ಮತ್ತು ಕುಟುಂಬ ಸದಸ್ಯರಿಂದ ಮುನ್ನಡೆಸಲ್ಪಟ್ಟಿರುವ ಪಕ್ಷಗಳು ಎಂದು ಅವರು ಟೀಕಿಸಿದರು.

‘ಇಂಡಿಯಾ’ ಮೈತ್ರಿಕೂಟದ ಕುರಿತು ವಾಗ್ದಾಳಿ ನಡೆಸಿದ ಅವರು, ‘ಪರಿಸ್ಥಿತಿಯ ಕಾರಣಕ್ಕಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ಕಾಂಗ್ರೆಸ್‌ ರಚಿಸಿದೆ. ಮಿತ್ರಪಕ್ಷಗಳನ್ನು ಬಳಸಿಕೊಳ್ಳುವುದಷ್ಟೇ ಅದರ ಉದ್ದೇಶ’ ಎಂದರು.

‘ಕೇರಳದಲ್ಲಿ ಕಾಂಗ್ರೆಸ್‌ ಮತ್ತು ಎಡ ಪಕ್ಷವು ಪರಸ್ಪರ ಕೆಸರು ಎರಚಿಕೊಳ್ಳುತ್ತವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಎಡಪಕ್ಷಗಳು ಪರಸ್ಪರ ವಾಗ್ವಾದಕ್ಕಿಳಿಯುತ್ತವೆ. ಪಂಬಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಎಲ್ಲವೂ ಸರಿಯಿಲ್ಲ. ಚುನಾವಣೆ ಮುನ್ನವೇ ಹೀಗೆ ಕಿತ್ತಾಡುವ ಪಕ್ಷಗಳು ಚುನಾವಣೆ ಬಳಿಕ ಹೇಗೆ ವರ್ತಿಸುತ್ತವೆ ಎಂಬುದನ್ನು ನೀವೇ ಊಹಿಸಿ’ ಎಂದು ಹೇಳಿದರು. 

ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಭ್ರಷ್ಟಾಚಾರ ನಡೆಸಲು ರೆಡ್ಡಿ ಸಂಪುಟದ ಸಚಿವರ ಮಧ್ಯೆ ಸ್ಪರ್ಧೆ ಇದೆ’ ಎಂದರು. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಬೇರೆಬೇರೆ ಎಂದು ಭಾವಿಸುವ ತಪ್ಪು ಮಾಡಬೇಡಿ ಎಂದು ಜನರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT