ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ.14ರಿಂದ ರಾಹುಲ್ ಗಾಂಧಿ ಭಾರತ್‌ ನ್ಯಾಯ ಯಾತ್ರೆ: ಮಣಿಪುರದಿಂದ ಮುಂಬೈವರೆಗೆ ಸಂಚಾರ

Published 27 ಡಿಸೆಂಬರ್ 2023, 15:51 IST
Last Updated 27 ಡಿಸೆಂಬರ್ 2023, 15:51 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಭಾರತದ ತುದಿಯಾದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಐದು ತಿಂಗಳು ನಡೆದ ‘ಭಾರತ್‌ ಜೋಡೊ ಯಾತ್ರೆ’ ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು 2024ರ ಜ. 14ರಿಂದ ‘ಭಾರತ್‌ ನ್ಯಾಯ ಯಾತ್ರೆ’ ಕೈಗೊಳ್ಳಲಿದ್ದಾರೆ.

ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದ ಇಂಫಾಲ್‌ನಿಂದ ಮುಂಬೈವರೆಗಿನ ಈ ಯಾತ್ರೆಯು 66 ದಿನ ನಡೆಯಲಿದೆ. ಲೋಕಸಭೆ ಚುನಾವಣೆ ಮುನ್ನ ಕೈಗೊಳ್ಳಲಿರುವ ಯಾತ್ರೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾಗಲಿವೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾತ್ರೆಗೆ ಹಸಿರು ನಿಶಾನೆ ತೋರುವರು. ಮಾರ್ಚ್‌ 20ರಂದು ಯಾತ್ರೆ ಕೊನೆಗೊಳ್ಳಲಿದೆ.

ರಾಹುಲ್‌ ಅವರ ಈ ಎರಡನೇ ಯಾತ್ರೆಯು ಪೂರ್ವದಿಂದ ಪಶ್ಚಿಮದವರೆಗೆ 14 ರಾಜ್ಯಗಳ 85 ಜಿಲ್ಲೆಗಳಲ್ಲಿ 6,200 ಕಿ.ಮೀ ಕ್ರಮಿಸಲಿದೆ. ಯಾತ್ರೆಯು ಹೈಬ್ರಿಡ್‌ ಮಾದರಿಯಲ್ಲಿ ಇರಲಿದ್ದು ಬಸ್‌ ಸಂಚಾರ ಮತ್ತು ಪಾದಯಾತ್ರೆ ಎರಡನ್ನೂ ಒಳಗೊಂಡಿರಲಿದೆ. 

ಯಾತ್ರೆಯು ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸಗಢ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಲಿದೆ.

ಕಳೆದ ವರ್ಷದ ಸೆ. 7ರಿಂದ ಈ ವರ್ಷದ ಜ. 20ರವರೆಗೆ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ನಡೆದ ‘ಭಾರತ್‌ ಜೋಡೊ ಯಾತ್ರೆ’ ಪಾದಯಾತ್ರೆಯು 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿತ್ತು.

ಯುವಜನರೊಂದಿಗೆ ಸಂವಾದ:  ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ಪಕ್ಷದ ಈ  ಹೊಸ ಕಾರ್ಯಕ್ರಮವನ್ನು ಪ್ರಕಟಿಸಿದರು. ನಿರುದ್ಯೋಗ, ಬೆಲೆ ಏರಿಕೆಯಿಂದ ಜನರಿಗೆ ಆಗಿರುವ ತೊಂದರೆಗಳ ಬಗ್ಗೆ ಯಾತ್ರೆ ಒತ್ತು ನೀಡಲಿದೆ. ಯುವ ಜನರು, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರೊಂದಿಗೆ ಸಂವಾದವನ್ನು ಒಳಗೊಂಡಿರುತ್ತದೆ ಎಂದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವು, ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ವಿಷಯಗಳಲ್ಲದೆ ‘ನ್ಯಾಯಕ್ಕಾಗಿ ಯಾತ್ರೆ’ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಖಾತರಿಪಡಿಸುವ ಉದ್ದೇಶವನ್ನೂ ಹೊಂದಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್‌ ರಮೇಶ್‌ ವಿವರಿಸಿದರು.

‘ಭಾರತ್ ಜೋಡೊ ಯಾತ್ರೆ’ ವೇಳೆ ಆರ್ಥಿಕ ಅಸಮಾನತೆ, ಧ್ರುವೀಕರಣ ಮತ್ತು ಸರ್ವಾಧಿಕಾರದ ವಿಷಯಗಳನ್ನು ರಾಹುಲ್‌ ಪ್ರಸ್ತಾಪಿಸಿದ್ದರು ಎಂದರು. 

‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆ ಕುರಿತು ಮಾತುಕತೆ ಆರಂಭಿಸಿರುವ ಸಂದರ್ಭದಲ್ಲೇ ಈ ಯಾತ್ರೆ ನಡೆಯುತ್ತಿದೆ. 

ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿಯವರು ಸುಮಾರು ಏಳು ತಿಂಗಳು ಮೌನವಾಗಿದ್ದರು. ರಾಜ್ಯವನ್ನು ಬಿಜೆಪಿ ಹಾಳುಗೆಡುವಿರುವುದರ ಬಗ್ಗೆ ಪಕ್ಷದ ಆತಂಕ ಮತ್ತು ಕಳಕಳಿಯನ್ನು ಯಾತ್ರೆ ಬಿಂಬಿಸುತ್ತದೆ. ಮಣಿಪುರವನ್ನು ಪುನರ್‌ನಿರ್ಮಿಸುವ ಪ್ರಕ್ರಿಯೆಗೆ ಯಾತ್ರೆ ಚಾಲನೆ ನೀಡುತ್ತದೆ ಎಂದು ಜೈರಾಮ್‌ ರಮೇಶ್‌ ಹೇಳಿದರು.

‘ಭಾರತ್‌ ಜೋಡೊ ಯಾತ್ರೆ’ಯ ಮಾದರಿಯಲ್ಲೇ ಎರಡನೇ ಯಾತ್ರೆಯನ್ನು ರಾಹುಲ್‌ ಅವರು ಕೈಗೊಳ್ಳಬೇಕು ಎಂದು ಈಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಒತ್ತಾಯ ಕೇಳಿಬಂದಿತ್ತು. 

ಪಕ್ಷದ ಚುನಾವಣಾ ಸಿದ್ಧತೆಗೆ ಯಾತ್ರೆಯು ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್‌ನ ಚುನಾವಣಾ ಸಿದ್ಧತೆ ಬಗ್ಗೆ ಚಿಂತೆ ಅಗತ್ಯವಿಲ್ಲ ಎಂದು ವೇಣುಗೋಪಾಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT