ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024: ಡಿ.21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

Published 17 ಡಿಸೆಂಬರ್ 2023, 6:38 IST
Last Updated 17 ಡಿಸೆಂಬರ್ 2023, 6:38 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮತ್ತು ಬಿಜೆಪಿಯನ್ನು ಮಣಿಸಲು ಭಿನ್ನ ರೀತಿಯ ಪ್ರಚಾರ ಅಭಿಯಾನ ರೂಪಿಸಲು ಕಾಂಗ್ರೆಸ್‌, ಡಿಸೆಂಬರ್ 21ರಂದು ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಕರೆದಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 19ರಂದು ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಯ ಬೆನ್ನಲ್ಲೇ ಈ ಸಭೆ ಆಯೋಜನೆಯಾಗಿದೆ. 2024ರ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಮತ್ತು ಪ್ರಚಾರ ಅಭಿಯಾನದ ರೂಪುರೇಷೆ ಸಿದ್ಧಪಡಿಸುವುದು ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸಭೆಯ ಪ್ರಮುಖ ಅಜೆಂಡಾ ಆಗಿರಲಿದೆ.

ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆಗೂ ಮುನ್ನ ಎರಡನೇ ಹಂತದ ಭಾರತ್‌ ಜೋಡೊ ಯಾತ್ರೆ ಕೈಗೊಳ್ಳುವ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಪಾದಯಾತ್ರೆ ಸೇರಿದಂತೆ ದೇಶದ ಪೂರ್ವ ಭಾಗದಿಂದ ಪಶ್ಚಿಮಕ್ಕೆ ‘ಹೈಬ್ರಿಡ್‌ ಮಾದರಿ’ ಯಾತ್ರೆ ಕೈಗೊಳ್ಳುವ ಚಿಂತನೆಯನ್ನು ಪಕ್ಷ ನಡೆಸಿದ್ದು, ಆ ಬಗ್ಗೆ ಶೀಘ್ರದಲ್ಲೇ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ. ಈಶಾನ್ಯದ ರಾಜ್ಯವೊಂದರಿಂದ ಆರಂಭಿಸಿ ಗುಜರಾತ್‌ವರೆಗೆ ಯಾತ್ರೆ ನಡೆಸಲು ಕಾಂಗ್ರೆಸ್‌ ಬಯಸಿದೆ.

ಈಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಯೂ ಸಭೆಯಲ್ಲಿ ಆಗಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಹಿನ್ನಡೆ ಅನುಭವಿಸಿದ್ದ ಪಕ್ಷ, ತೆಲಂಗಾಣದಲ್ಲಿ ಮಾತ್ರ ಅಧಿಕಾರ ತನ್ನದಾಗಿಸಿಕೊಂಡಿದೆ.

‘ಇಂಡಿಯಾ’ ಸಭೆ ನಾಳೆ

ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಲ್ಕನೇ ಸಭೆಯು ಡಿಸೆಂಬರ್‌ 19ರಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮತ್ತು ಜಂಟಿಯಾಗಿ ರ‍್ಯಾಲಿಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ‘ನಾನಲ್ಲ, ನಾವು’ ಎಂಬ ಘೋಷಣೆಯಡಿ ಕೆಲಸ ಮಾಡುವ ನಿರ್ಧಾರವನ್ನು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ತೆಗೆದುಕೊಂಡಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT