ನವದೆಹಲಿ: ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ ಅನುಸರಿಸುತ್ತಿರುವ ‘ಗ್ಯಾರಂಟಿ ಸೂತ್ರ’ ದೇಶವನ್ನು ದಿವಾಳಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸ್ಥಾನದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದೇ ತಿಂಗಳ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ವಿಚಾರ ಉಲ್ಲೇಖಿಸಿದರು. ಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಅನುಸರಿಸುತ್ತಿದೆ. ಆದರೆ, ಅವರು (ಕಾಂಗ್ರೆಸ್ಸಿಗರು) ಕೊಟ್ಟ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಐವತ್ತು ವರ್ಷಗಳ ಹಿಂದೆ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಇದು ಬಡವರಿಗೆ ಕಾಂಗ್ರೆಸ್ಸಿಗರು ಮಾಡಿದ ದೊಡ್ಡ ದ್ರೋಹ ಎಂದು ಕಿಡಿಕಾರಿದ್ದಾರೆ.
ಬಡವರನ್ನು ದಾರಿ ತಪ್ಪಿಸುವುದು, ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಸಹ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜಸ್ಥಾನಕ್ಕೆ ಏನು ಸಿಕ್ಕಿದೆ? ಮುಖ್ಯಮಂತ್ರಿ, ಸಚಿವರು, ಶಾಸಕರು ತಮ್ಮ ತಮ್ಮಲ್ಲೇ ಜಗಳವಾಡುತ್ತಾರೆ ಎಂದು ಗುಡುಗಿದ್ದಾರೆ.
ದೇಶದಲ್ಲಿ 2014ಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದರು. ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಆದರೆ, ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ನಡೆಸುತ್ತಿತ್ತು ಎಂದು ಮೋದಿ ದೂರಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ತಮ್ಮ ಸರ್ಕಾರವು ಜನರ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಗೆ ಮುಂದಿನ ಐದು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈ ವರ್ಷ ಪ್ರಧಾನಿ ಮೋದಿ ಐದು ಭಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.