ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MSP ಕಾನೂನು ತರಲು ರೈತ ಸಂಘಗಳ ಒತ್ತಾಯ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಆಗ್ರಹ

Published 20 ಫೆಬ್ರುವರಿ 2024, 15:46 IST
Last Updated 20 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ಚಂಡೀಗಢ/ನವದೆಹಲಿ: ಸ್ವಾಮಿನಾಥನ್ ಆಯೋಗದ ವರದಿ ಜಾರಿ ಸೇರಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿದರಷ್ಟೇ ರೈತರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದಿರುವ ರೈತ ಸಂಘಗಳು, ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನು ತರಲು ಕೇಂದ್ರ ಸರ್ಕಾರ ಒಂದು ದಿನದ ಮಟ್ಟಿಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿವೆ.

ಕೃಷಿ ಸಾಲ ಮನ್ನಾ ಸೇರಿದಂತೆ ರೈತರ ಇತರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿ, ಪರಿಹಾರ ಒದಗಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೆ, ‘ದೆಹಲಿ ಚಲೋ’ ಮೆರವಣಿಗೆ ಕುರಿತು ‘ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ’ ಎಂದೂ ಹೇಳಿವೆ.

ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಐದು ವರ್ಷಗಳವರೆಗೆ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯು ರೈತರ ಪರವಾಗಿಲ್ಲ ಎಂದು ರೈತ ಮುಖಂಡರು ಸೋಮವಾರವಷ್ಟೇ ತಿರಸ್ಕರಿಸಿ, ‘ದೆಹಲಿ ಚಲೋ’ ಮುಂದುವರಿಸುವುದಾಗಿ ಘೋಷಿಸಿದ್ದರು.

ಶಂಭು ಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಿಸಾನ್‌ ಮಜ್ದೂರ್‌ ಮೋರ್ಚಾದ ನಾಯಕ ಸರವಣ್‌ ಸಿಂಗ್‌ ಪಂಢೇರ್, ಪ್ರತಿಭಟನಾನಿರತ ರೈತರ ಪ್ರಮುಖ ಬೇಡಿಕೆಯಾದ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನು ತರುವ ಇಚ್ಛಾಶಕ್ತಿ ಪ್ರಧಾನಿ ಅವರಿಗೆ ಇದ್ದರೆ, ಅವರು ಒಂದು ದಿನದ ಮಟ್ಟಿಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಎಂಎಸ್‌ಪಿ ಕಾನೂನು ತರುವುದಾದರೆ ಅದರ ಪರ ಮತ ಹಾಕುವ ಕುರಿತು ಕಾಂಗ್ರೆಸ್‌, ಶಿರೋಮಣಿ ಅಕಾಲಿ ದಳ,  ತೃಣಮೂಲ ಕಾಂಗ್ರೆಸ್‌ ಸೇರಿ ಎಲ್ಲ ವಿರೋಧ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎಂದು ಅವರು ಆಗ್ರಹಿಸಿದರು. 

ಸರ್ಕಾರಿ ವರದಿಗಳ ಪ್ರಕಾರ ರೈತರ ಒಟ್ಟು ಸಾಲ ₹ 18.5 ಲಕ್ಷ ಕೋಟಿ ಆಗಿದ್ದು, ಪ್ರಧಾನಿ ಅವರು ಕೃಷಿ ಸಾಲ ಮನ್ನಾ ಮಾಡುವ ಕುರಿತು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

‘ಮೋದಿ ಅವರು ಬಲಿಷ್ಠ ಪ್ರಧಾನಿ ಎಂದು ಬಿಜೆಪಿಯವರು ಹೇಳುತ್ತಾರೆ. ಅದರಂತೆ ಪ್ರಧಾನಿ ಅವರು 80 ಕೋಟಿ ರೈತರು ಮತ್ತು ರೈತ ಕಾರ್ಮಿಕರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿ, ತಾನು ನೈಜವಾಗಿಯೂ ಬಲಿಷ್ಠ ಎಂಬುದನ್ನು ಸಾಬೀತು ಮಾಡಲಿ’ ಎಂದು ಅವರು ಹೇಳಿದರು. 

ಮಾನ್‌ ವಿರುದ್ಧ ಬಿಜೆಪಿ ಕಿಡಿ:

ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದ ರೈತ ಮುಖಂಡರು ಮತ್ತು ಕೇಂದ್ರ ಸಚಿವರ ಪ್ರಮಾಣಿಕ ಪ್ರಯತ್ನಗಳಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಧಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ಸುನೀಲ್‌ ಜಾಖರ್‌ ಮಂಗಳವಾರ ಆರೋಪಿಸಿದರು.

ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆಗಳು ಫಲಪ್ರದ ಆಗದಿರುವುದು ದುರದೃಷ್ಟಕರ ಎಂದಿರುವ ಅವರು,  ಮುಖ್ಯಮಂತ್ರಿ ಮಾನ್‌ ಅವರಿಂದ ಈ ಮಾತುಕತೆಗಳು ವಿಫಲವಾಗಿವೆ. ಇದರಿಂದ ಅವರಿಗೆ ಹೆಚ್ಚು ಅನುಕೂಲವಿದೆ. ಈ ಕಾರ್ಯಾಚರಣೆಯಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಪಂಜಾಬ್‌ನಲ್ಲಿ ತನ್ನ ಸರ್ಕಾರ ರಚನೆಯಾದ ಐದು ನಿಮಿಷಗಳಲ್ಲಿಯೇ ಎಂಎಸ್‌ಪಿ ನೀಡುವ ಭರವಸೆಯಿಂದ ಮಾನ್‌ ಹಿಂದೆ ಸರಿದಿದ್ದರು. ಪಂಜಾಬಿನ ರೈತರಿಗೆ ಪ್ರವಾಹದ ಪರಿಹಾರವನ್ನೂ ವಂಚಿಸಿರುವ ಇಂತಹ ವ್ಯಕ್ತಿಗೆ ರೈತರ ಪರ ವಕಾಲತು ವಹಿಸುವ ಅಧಿಕಾರ ನೀಡಿದವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ. 

ಭಾನುವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಮಾನ್‌ ಅವರು, ತಾನು ರೈತರ ‘ವಕೀಲ’ನಾಗಿ ಭಾಗವಹಿಸಿದ್ದೇನೆ ಎಂದಿದ್ದರು. ರೈತ ಮುಖಂಡರು ಮತ್ತು ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌, ಅರ್ಜುನ್‌ ಮುಂಡಾ, ನಿತ್ಯಾನಂದ ರಾಯ್‌ ಅವರ ನಡುವೆ ನಾಲ್ಕನೇ ಸುತ್ತಿನ ಸಭೆ ನಡೆದಿತ್ತು. 

ಎಂಎಸ್‌ಪಿ ಬಜೆಟ್‌ಗೆ ಹೊರೆಯಾಗದು: ರಾಹುಲ್
ನವದೆಹಲಿ: ಕಾನೂನುಬದ್ಧವಾಗಿ ಎಂಎಸ್‌ಪಿ ಜಾರಿಗೊಳಿಸಿದರೆ ಬಜೆಟ್‌ಗೆ ಯಾವುದೇ ರೀತಿಯ ಹೊರೆ ಆಗುವುದಿಲ್ಲ. ಬದಲಿಗೆ ಇದರಿಂದ ರೈತರು ಜೆಡಿಪಿ ಬೆಳವಣಿಗೆಗೆ ಕಾರಣೀಕರ್ತರಾಗುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಪ್ರತಿಪಾದಿಸಿದ್ದಾರೆ.  ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ‘ಎಂಎಸ್‌ಪಿ ಗ್ಯಾರಂಟಿ’ ಕಾರ್ಯಸಾಧುವಲ್ಲ ಎಂಬ ಸುಳ್ಳನ್ನು ಹರಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ‘ಕಾಂಗ್ರೆಸ್‌ ಪಕ್ಷವು ಎಂಎಸ್‌ಪಿಗೆ ಕಾನೂನು ಬದ್ಧ ಗ್ಯಾರಂಟಿ ನೀಡಲು ನಿರ್ಧರಿಸಿದಾಗಿನಿಂದ ಮೋದಿ ಪರ ಪ್ರಚಾರಕ ಯಂತ್ರಗಳು ಮತ್ತು ಅವರ ಪರ ಇರುವ ಮಾಧ್ಯಮಗಳು ಅಪಪ್ರಚಾರದಲ್ಲಿ ತೊಡಗಿವೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಕ್ರಿಸಿಲ್‌ ಅಂಕಿ ಅಂಶಗಳ ಪ್ರಕಾರ 2022–23ರಲ್ಲಿ ರೈತರಿಗೆ ಎಂಎಸ್‌ಪಿ ನೀಡಿದ್ದರೆ 21000 ಕೋಟಿ ಹೆಚ್ಚುವರಿ ಹೊರೆಯಾಗುತ್ತಿತ್ತು. ಅದು ಸರ್ಕಾರ ಒಟ್ಟು ಬಜೆಟ್‌ನಲ್ಲಿ ಕೇವಲ ಶೇ 0.4ರಷ್ಟು ಆಗುತ್ತಿತ್ತು’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 
ಅಮರಿಂದರ್ ಸಿಂಗ್‌– ಪ್ರಧಾನಿ ಭೇಟಿ:
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಅಮರಿಂದರ್ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.  ಈ ಕುರಿತು ಸಿಂಗ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT