ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: ಕೋರ್ಟ್‌ಗಳಿಗೆ ಎಚ್ಚರಿಕೆ ಬೇಕು

Published 28 ಫೆಬ್ರುವರಿ 2024, 16:01 IST
Last Updated 28 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ಕಾನೂನುಗಳನ್ನು ಸರಿಯಾಗಿ ಅನ್ವಯಿಸುವ ವಿಚಾರದಲ್ಲಿ ಕೋರ್ಟ್‌ಗಳು ಬಹಳ ಜಾಗರೂಕರಾಗಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠವು ನರೇಶ್ ಕುಮಾರ್ ಎನ್ನುವವರನ್ನು ದೋಷಮುಕ್ತಗೊಳಿಸಿದೆ. ನರೇಶ್ ಅವರ ವಿವಾಹವು 1992ರ ಮೇ ತಿಂಗಳಲ್ಲಿ ಆಗಿತ್ತು. ಅವರ ಪತ್ನಿ 1993ರ ನವೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ನರೇಶ್ ಅವರ ಕಷ್ಟಗಳು 1993ರಲ್ಲಿ ಶುರುವಾದವು. ಅವು 2024ರಲ್ಲಿ ಕೊನೆಗೊಂಡಿವೆ. ಅಂದರೆ ಅವರು ಸರಿಸುಮಾರು ಮೂವತ್ತು ವರ್ಷ ಕಷ್ಟ ಅನುಭವಿಸಿದ್ದಾರೆ. ದೇಶದ ಕ್ರಿಮಿನಲ್ ಅಪರಾಧ ನ್ಯಾಯ ವ್ಯವಸ್ಥೆಯೇ ಒಂದು ಶಿಕ್ಷೆಯಾಗಿ ಪರಿಣಮಿಸಿದೆ ಎಂದು ಪೀಠವು ಖೇದ ವ್ಯಕ್ತಪಡಿಸಿದೆ.

‘ಈ ಪ್ರಕರಣದಲ್ಲಿ ಆಗಿರುವುದು ಇದೇ. ನರೇಶ್ ಅವರನ್ನು ಶಿಕ್ಷೆಗೆ ಗುರಿಪಡಿಸಿದ್ದು ಕಾನೂನಿನ ಅಡಿಯಲ್ಲಿ ಸಿಂಧುವಲ್ಲ ಎಂಬ ತೀರ್ಮಾನಕ್ಕೆ ಬರಲು ಈ ನ್ಯಾಯಾಲಯಕ್ಕೆ 10 ನಿಮಿಷಗಳಿಗಿಂತ ಹೆಚ್ಚಿನ ಅವಧಿ ಬೇಕಾಗಲಿಲ್ಲ’ ಎಂದು ಪೀಠವು ವಿವರಿಸಿದೆ.

ಮದುವೆಯಾದ ಏಳು ವರ್ಷಗಳ ಒಳಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಒಂದೇ ಕಾರಣ ನೀಡಿ, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 113(ಎ) ಅಡಿಯಲ್ಲಿ, ಆತ್ಮಹತ್ಯೆಗೆ ಪತಿ ಅಥವಾ ಅವರ ಸಂಬಂಧಿಕರು ಕಾರಣ ಎಂಬ ಪೂರ್ವನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಪೀಠವು ಹೇಳಿದೆ.

‘ಆಕೆ ಕ್ರೌರ್ಯಕ್ಕೆ ಗುರಿಯಾಗಿದ್ದಳೇ ಎಂಬುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಪರಿಶೀಲಿಸುವಾಗ ನ್ಯಾಯಾಲಯವು ಬಹಳ ಎಚ್ಚರಿಕೆ ವಹಿಸಬೇಕು. ಆತ್ಮಹತ್ಯೆ ಮಾಡಿಕೊಂಡವಳು ಸಮಾಜದಲ್ಲಿ ತೀರಾ ಸಹಜವಾಗಿರುವ ಭಿನ್ನಾಭಿಪ್ರಾಯಗಳಿಗೆ, ಸಂಘರ್ಷಗಳಿಗೆ, ಸಿಡುಕುಗಳಿಗೆ ಅತಿಯಾದ ಸಂವೇದನೆ ಬೆಳೆಸಿಕೊಂಡಿದ್ದರೆ, ಅಂತಹ ಪರಿಸ್ಥಿತಿಯು ಅಂಥದ್ದೇ ಪರಿಸರದಲ್ಲಿ ಇರುವ ಬೇರೊಬ್ಬರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುವುದಿಲ್ಲ ಎಂದಾದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯು ಅಪರಾಧಿ ಎಂದು ಘೋಷಿಸಲು ಕೋರ್ಟ್‌ನ ಆತ್ಮಸಾಕ್ಷಿಯು ಒಪ್ಪುವುದಿಲ್ಲ’ ಎಂದು ಪೀಠವು ವಿವರಿಸಿದೆ.

‘ಆರೋಪಿಯು ಕಿರುಕುಳ ನೀಡುತ್ತಿದ್ದ ಎಂಬುದೊಂದೇ, ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ತೀರ್ಮಾನಿಸಲು ಆಧಾರ ಆಗುವುದಿಲ್ಲ. ಸಂತ್ರಸ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನೇರವಾದ ಅಥವಾ ಸಕ್ರಿಯವಾದ ಪಾತ್ರ ಅಲ್ಲಿರಬೇಕಾಗುತ್ತದೆ’ ಎಂದು ಅದು ಹೇಳಿದೆ.‌

ಸಂತ್ರಸ್ತೆಯು ಮದುವೆಯಾದ ಏಳು ವರ್ಷಗಳಿಗೂ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಆರೋಪಿಯು ಹೊಸ ವಹಿವಾಟು ಆರಂಭಿಸಲು ತಂದೆ–ತಾಯಿಯಿಂದ ಹಣ ತಂದುಕೊಡುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ ಮತ್ತು ಸಂತ್ರಸ್ತೆಯು ಯಾವಾಗಲೂ ಚಿಂತಾಕ್ರಾಂತಳಾಗಿ ಇರುತ್ತಿದ್ದಳು ಎಂಬ ಮೂರು ಅಂಶಗಳಿಂದ ಮಾತ್ರ ಹೈಕೋರ್ಟ್‌ ಹಾಗೂ ವಿಚಾರಣಾ ನ್ಯಾಯಾಲಯವು ಈ ಪ್ರಕರಣದಲ್ಲಿ ಪ್ರಭಾವಿತವಾಗಿವೆ ಎಂದು ಸುಪ್ರೀಂ ಕೋರ್ಟ್‌ನ ಪೀಠವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT