ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಣಿಗಳ ಕೊಬ್ಬು ಇದ್ದ ತುಪ್ಪ ಬಳಸಿಲ್ಲ: TTD ಇ.ಒ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ

ಲಾಡು ಪ್ರಕರಣ: ಲಬೆರಕೆ ಪರೀಕ್ಷೆಗೆ ಉಪಕರಣಗಳಿಲ್ಲ
Published : 23 ಸೆಪ್ಟೆಂಬರ್ 2024, 20:39 IST
Last Updated : 23 ಸೆಪ್ಟೆಂಬರ್ 2024, 20:39 IST
ಫಾಲೋ ಮಾಡಿ
Comments

ಹೈದರಾಬಾದ್: ತಮಿಳುನಾಡು ಮೂಲದ ಎ.ಆರ್‌.ಡೇರಿ ಪೂರೈಸಿರುವ ಶಂಕಿತ ಕಲಬೆರಕೆ ತುಪ್ಪವನ್ನು ಲಾಡುಗಳ ತಯಾರಿಕೆಗೆ ಬಳಸಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವರದಿ ತಿಳಿಸಿದೆ.

ಲಾಡುಗಳ ಸಿದ್ಧಪಡಿಸಲು ಬಳಸುತ್ತಿದ್ದ ತುಪ್ಪವು ಪ್ರಾಣಿಗಳ ಕೊಬ್ಬಿನ ಅಂಶದೊಂದಿಗೆ ಕಲಬೆರಕೆ ಆಗಿರುವ ವಿಚಾರ ದೇಶವ್ಯಾಪಿ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಟಿಟಿಡಿ ಕಾರ್ಯನಿರ್ವಹಣಾ ಅಧಿಕಾರಿ ಜೆ. ಶ್ಯಾಮಲ ರಾವ್‌ ಸರ್ಕಾರಕ್ಕೆ ಸಲ್ಲಿಸಿರುವ 40 ಪುಟಗಳ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿದೆ.

‘ದಿಂಡಿಗಲ್‌ನ ಎ.ಆರ್‌.ಡೇರಿ ಕಂಪನಿ ಜುಲೈ 6 ಮತ್ತು ಜುಲೈ 15ರಂದು ತಲಾ ಎರಡು ಟ್ಯಾಂಕರ್‌ಗಳಲ್ಲಿ ತುಪ್ಪ ಪೂರೈಸಿತ್ತು. ಭೌತಿಕ ಪರೀಕ್ಷೆಯಲ್ಲಿ ಗುಣಮಟ್ಟ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಬಳಿಕ, ಅದರ ನಾಲ್ಕು ಮಾದರಿಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮಾನದಂಡಗಳ ಪ್ರಕಾರ ಗುಣಮಟ್ಟ ಹೊಂದಿದೆಯೇ ಎಂಬುದನ್ನು ತಿಳಿದುಕೊಳ್ಳಲು, ಗುಜರಾತ್‌ನ ಆನಂದ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಪ್ರಯೋಗಾಲಯಕ್ಕೆ ಗೋಪ್ಯವಾಗಿ ಕಳುಹಿಸಲಾಗಿತ್ತು.

‘ಎನ್‌ಡಿಡಿಬಿ ವರದಿಯು ಜುಲೈ 16 ಮತ್ತು ಜುಲೈ 23ರಂದು ತಲುಪಿತ್ತು. ಅದರ ಪ್ರಕಾರ, ಪರೀಕ್ಷೆಗೆ ಕಳುಹಿಸಿದ್ದ ತುಪ್ಪದ ನಾಲ್ಕು ಮಾದರಿಯಲ್ಲೂ ಸಸ್ಯಜನ್ಯ ಮಾತ್ರವಲ್ಲದೆ, ಹಂದಿ ಸೇರಿದಂತೆ ಇತರ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ. ಇದನ್ನು ಆಧರಿಸಿ, ಎ.ಆರ್‌. ಡೇರಿ ಕಂಪನಿ ಪೂರೈಸಿದ್ದ ಕಲಬೆರಕೆ ತುಪ್ಪದ ಟ್ಯಾಂಕರ್‌ಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಅಲ್ಲದೆ ಆ ಕಂಪನಿಗೆ ಜುಲೈ 22, 23 ಮತ್ತು 27ರಂದು ಶೋಕಾಸ್‌ ನೋಟಿಸ್‌ ನೀಡಲಾಗಿದೆ.

‘ಹಸುವಿನ 10 ಲಕ್ಷ ಕೆ.ಜಿ ತುಪ್ಪ ಪೂರೈಸಲು ಎ.ಆರ್‌.ಡೇರಿಗೆ ಮೇ ತಿಂಗಳಲ್ಲಿ ಟೆಂಡರ್‌ ಅಂತಿಮವಾಗಿತ್ತು. ಅದು ಕೆ.ಜಿಗೆ ₹ 319.80ರಂತೆ ತುಪ್ಪ ಪೂರೈಸುವುದಾಗಿ ದರ ನಮೂದಿಸಿತ್ತು ಎಂದು ವರದಿಯಲ್ಲಿ ದಾಖಲಿಸಲಾಗಿದೆ.

ವರದಿಯಲ್ಲಿರುವ ಇತರ ಪ್ರಮುಖಾಂಶಗಳು:

* ತಿರುಮಲ ಮತ್ತು ತಿರುಚನೂರು ದೇಗುಲಗಳಲ್ಲಿ ಲಾಡು ಮತ್ತು ಇತರ ಪ್ರಸಾದಗಳನ್ನು ಸಿದ್ಧಪಡಿಸಲು ಆರು ತಿಂಗಳಿಗೊಮ್ಮೆ ಅಗ್‌ಮಾರ್ಕ್‌ ಗುರುತು ಹೊಂದಿರುವ ಹಸುವಿನ ತುಪ್ಪವನ್ನು ಇ–ಟೆಂಡರ್‌ ಮೂಲಕ ಖರೀದಿಸಲಾಗುತ್ತದೆ. ಟಿಟಿಡಿ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ ತುಪ್ಪ ಗುಣಮಟ್ಟ ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಹೇಳಲಾಗಿರುತ್ತದೆ. 

* ಲಾಡುಗಳನ್ನು ಸಿದ್ಧಪಡಿಸಲು ದಿನಕ್ಕೆ 15 ಸಾವಿರ ಕೆ.ಜಿಯಂತೆ ವಾರ್ಷಿಕ ಸುಮಾರು ₹ 200 ಕೋಟಿ ಮೌಲ್ಯದ ತುಪ್ಪ ಖರೀದಿಗೆ ಟೆಂಡರ್‌ ಕರೆಯಲಾಗುತ್ತದೆ. 

* ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗಿದೆಯಾದರೂ ಅವುಗಳ ಪರೀಕ್ಷೆಗೆ ಅಗತ್ಯವಿರುವ ಸಾಧನಗಳು ಟಿಟಿಡಿಯ ಪ್ರಯೋಗಾಲಯದಲ್ಲಿಲ್ಲ. ಹೀಗಾಗಿ ಕಲಬೆರಕೆ ಕುರಿತು ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ.

* ಗುತ್ತಿಗೆದಾರರು ಟ್ಯಾಂಕರ್‌ಗಳಲ್ಲಿ ಕಳುಹಿಸಿದ ತುಪ್ಪದ ತೇವಾಂಶ ಕೊಬ್ಬಿನಾಮ್ಲ ಮಿಶ್ರಿತ ಬಣ್ಣ ಕರಗುವ ಬಿಂದು ಸೇರಿದಂತೆ ಕೆಲ ಮೂಲ ಪರೀಕ್ಷೆಗಳನ್ನಷ್ಟೇ ಮಾಡಲಾಗುತ್ತದೆ. ಈ ವೇಳೆ ಏನಾದರೂ ವ್ಯತ್ಯಾಸ ಕಂಡು ಬಂದರೆ ಆ ಟ್ಯಾಂಕರ್‌ಗಳ ತುಪ್ಪವನ್ನು ತಿರಸ್ಕರಿಸಲಾಗುತ್ತದೆ.

* ಕಲಬೆರಕೆ ಹೊರತುಪಡಿಸಿ ಇತರ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ 14 ಮಾದರಿಗಳನ್ನು 2022ರಲ್ಲಿ ತಿರಸ್ಕರಿಸಲಾಗಿದೆ. ಎನ್‌ಎಬಿಎಲ್‌ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಕಲಬೆರಕೆಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸಬಹುದಾಗಿದ್ದರೂ ಅದನ್ನು ಎಂದಿಗೂ ಮಾಡಿಲ್ಲ.

* ಟಿಟಿಡಿ ಪ್ರಯೋಗಾಲಯದಲ್ಲಿ ಸಮರ್ಪಕ ಉಪಕರಣಗಳು ಇಲ್ಲ ಮತ್ತು ಹೊರಗೂ ಪರೀಕ್ಷೆ ನಡೆಸುತ್ತಿಲ್ಲ ಎಂಬುದರ ಲಾಭ ಪಡೆದ ತುಪ್ಪ ಪೂರೈಕೆದಾರರು ಕೆ.ಜಿ ತುಪ್ಪಕ್ಕೆ ₹ 320ರಿಂದ ₹ 411ರ ನಡುವಿನ ದರವನ್ನು ನಮೂದಿಸಲು ಆರಂಭಿಸಿದ್ದರು. ಇಷ್ಟು ಕಡಿಮೆ ದರಕ್ಕೆ ಶುದ್ಧ ತುಪ್ಪ ಪೂರೈಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕಡಿಮೆ ಬೆಲೆ ನಮೂದಿಸುವ ಗುತ್ತಿಗೆದಾರರನ್ನು ಆಯ್ಕೆ ಮಾಡುವ ವಿಧಾನದಿಂದಾಗಿ ಗುಣಮಟ್ಟದ ತುಪ್ಪ ಪೂರೈಕೆದಾರರು ವಂಚಿತರಾಗುತ್ತಿದ್ದಾರೆ.

* ಪೂರೈಕೆದಾರರು ಕಳುಹಿಸುತ್ತಿದ್ದ ತುಪ್ಪದ ಸುವಾಸನೆ ಮತ್ತು ರುಚಿಯ ಗುಣಮಟ್ಟ ಇಲ್ಲದ್ದನ್ನು ಗಮನಿಸಿದ್ದ ಟಿಟಿಡಿ ಗುಣಮಟ್ಟ ಸುಧಾರಿಸಲು ಎಲ್ಲ ಪೂರೈಕೆದಾರರಿಗೆ ಎಚ್ಚರಿಕೆ ನೀಡಿತ್ತು. ಕಲಬೆರಕೆಗೆ ಸಂಬಂಧಿಸಿದಂತೆ ಹೊರಗಿನ ಪ್ರಯೋಗಾಲಯದ ಮೂಲಕ ಪರೀಕ್ಷೆಗೆ ಒಳಪಡಿಸಲಾಗುವುದು ಎಂದೂ ತಿಳಿಸಲಾಗಿತ್ತು. ಆ ಬಳಿಕ ಎ.ಆರ್‌. ಡೇರಿ ಕಂಪನಿ ಹೊರತು ಪಡಿಸಿ ಉಳಿದ ಪೂರೈಕೆದಾರರು ಗುಣಮಟ್ಟ ಸುಧಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT