ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರವೂ ಇರಲಿ, ಜನತೆಗೆ ಸೌಕರ್ಯಗಳೂ ಬರಲಿ: ಅಮಿಷ್‌ ತ್ರಿಪಾಠಿ

Published 1 ಫೆಬ್ರುವರಿ 2024, 15:45 IST
Last Updated 1 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ಜೈಪುರ: ದೇಶದಲ್ಲಿ ರಾಮಮಂದಿರ ಕಟ್ಟಿದರೆ ಜನರಿಗೆ ಮೂಲಸೌಕರ್ಯ ಸಿಗುತ್ತದೆಯೇ ಎನ್ನುವ ಪ್ರಶ್ನೆ ಆಗಾಗ ಎದುರಾಗುತ್ತದೆ. ಒಂದು ದೇಶದಲ್ಲಿ ಮೂಲಸೌಕರ್ಯ ಎಷ್ಟು ಅಗತ್ಯವೋ ಹಾಗೆಯೇ ಸಾಂಸ್ಕೃತಿಕವಾಗಿ ಅದು ಮುಂದುವರೆಯುವುದೂ ಅಷ್ಟೇ ಅಗತ್ಯ ಎಂದು ಲೇಖಕ ಅಮಿಷ್‌ ತ್ರಿಪಾಠಿ ಅಭಿಪ್ರಾಯಪಟ್ಟರು.

ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದಮಾತ್ರಕ್ಕೆ ದೇಶದಲ್ಲಿ ಆಸ್ಪತ್ರೆಗಳ ನಿರ್ಮಾಣವಾಗುವುದಿಲ್ಲ ಎಂದು ಅರ್ಥವಲ್ಲ. ರಾಮನ ಮಾದರಿಯನ್ನು ಈ ದೇಶವು ಬಹುಕಾಲದಿಂದ ಆರಾಧಿಸುತ್ತ ಬಂದಿದೆ. ಆದ್ದರಿಂದ ಸಂಸ್ಕೃತಿಯೂ ಸೌಕರ್ಯವೂ ಜೊತೆಯಾಗಿ ಸಾಗಬೇಕು ಎಂದು ಅವರು ಹೇಳಿದರು.

ಜೈಪುರ ಸಾಹಿತ್ಯೋತ್ಸವದಲ್ಲಿ ವಿಗ್ರಹಗಳ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾಸ ಮತ್ತು ಕಾಳಿದಾಸ ಮಹಾಕವಿಯ ಕಾಲದಲ್ಲಿ ಎಷ್ಟೊಂದು ಉತ್ತಮ ಸಾಹಿತ್ಯಗಳು ಸೃಷ್ಟಿಯಾಗಿದ್ದವು. ಜಗತ್ತಿನ ಇತರ ರಾಷ್ಟ್ರಗಳೂ ಅಂದಿನ ಕಾಲದಲ್ಲಿ ಜ್ಞಾನಕ್ಕಾಗಿ ಭಾರತದತ್ತ ಮುಖಮಾಡಿದ್ದವು. ಯಾವಾಗ ಒಂದು ದೇಶವು ಆತ್ಮವಿಶ್ವಾಸದಿಂದ ಎದ್ದು ನಿಲ್ಲುತ್ತದೋ, ಆಗ ಇಂತಹ ಉತ್ತಮ ಸಾಹಿತ್ಯಕೃತಿಗಳು ಮೂಡುತ್ತವೆ. ಆದರೆ, ಶತಮಾನಗಳ ಕಾಲ ಭಾರತವು ನಿರಂತರ ದಾಳಿಯನ್ನು ಎದುರಿಸಿದ ಫಲವಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು. ಈಗ ಮತ್ತೆ ಅಂತಹ ಆತ್ಮವಿಶ್ವಾಸದಿಂದ ಎದ್ದು ನಿಲ್ಲಲಿದೆ’ ಎಂದರು.

ವಿಗ್ರಹಾರಾಧನೆಗೆ ಎದುರಾಗುತ್ತಿರುವ ಪ್ರತಿರೋಧಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದು ಹೀಗೆ: ‘ವಿಗ್ರಹಾರಾಧನೆಯನ್ನು ವಿರೋಧಿಸುವ ಚಾರ್ವಾಕ ಪಂಥದವರು ಹಿಂದೆಯೂ ಭಾರತದಲ್ಲಿ ಇದ್ದರು. ಯಾವುದೇ ನಂಬಿಕೆಯನ್ನು ವಿರೋಧಿಸುವುದು ದೊಡ್ಡ ಸಂಗತಿಯಲ್ಲ. ನಂಬುವವರು ಮತ್ತು ನಂಬದೇ ಇರುವವರು ಜೀವನದಲ್ಲಿ ಪರಸ್ಪರ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕಷ್ಟೆ. ಹಾಗೆ ನೋಡಿದರೆ, ವಿಗ್ರಹರಾಧನೆ ಮಾಡುವ ಪಂಥಗಳು ಹೆಚ್ಚು ಮುಕ್ತವಾಗಿ ಇರುತ್ತವೆ. ಯಾಕೆಂದರೆ ಅವರು ದೇವರನ್ನು ವಿಗ್ರಹವೊಂದರಲ್ಲಿ ನೋಡಬಲ್ಲವರೆಂದರೆ, ಇತರರಲ್ಲಿಯೂ ಕಾಣಬಲ್ಲವರಾಗಿರುತ್ತಾರೆ.’

ಅಮಿಷ್‌ ಅವರ ಸೋದರಿ ಭಾವನಾ ರಾಯ್‌ ಅವರೂ ವಿಗ್ರಹಾರಾಧನೆಯ ಮಹತ್ವದ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT