ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌತೆ ಚಂಡಮಾರುತ: ಗುಜರಾತ್‌ ಸರ್ಕಾರದಿಂದ ಮೀನುಗಾರರಿಗೆ ₹105 ಕೋಟಿ ಪರಿಹಾರ

Last Updated 2 ಜೂನ್ 2021, 8:29 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಳೆದ ತಿಂಗಳು ಗುಜರಾತ್‌ನ ಕರಾವಳಿ ತೀರದಲ್ಲಿ ‘ತೌತೆ’ ಚಂಡಮಾರುತವು ಭಾರಿ ಹಾನಿಯನ್ನುಂಟು ಮಾಡಿದ್ದು, ತೊಂದರೆಗೊಳಗಾದ ಮೀನುಗಾರರಿಗೆ ಗುಜರಾತ್‌ ಸರ್ಕಾರವು ₹105 ಕೋಟಿ ಪರಿಹಾರ ಘೋಷಿಸಿದೆ.

‘ಈ ಬಗ್ಗೆ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೇ 17ರ ರಾತ್ರಿ ತೌತೆ ಚಂಡಮಾರುತವು 220 ಕಿ.ಮೀ ವೇಗದಲ್ಲಿ ಗುಜರಾತ್‌ ಕರಾವಳಿಯನ್ನು ಅಪ್ಪಳಿಸಿತ್ತು.

‘ತೌತೆ ಚಂಡಮಾರುತದಿಂದ ಜಾಫರಾಬಾದ್‌, ರಜುಲಾ, ಸೈಯದ್‌ ರಾಜ್‌ಪಾರಾ, ಶಹಿಯಾಲ್‌ ಬೆಟ್‌ ಮತ್ತು ನವಾ ಬಂದರ್‌ಗಳ ಮೂಲಸೌಕರ್ಯಗಳು, ಆ್ಯಂಕರ್‌ ಬೋಟ್‌ಗಳು, ಮೀನು ಹಿಡಿಯುವ ಬಲೆ, ಟ್ರಾಲರ್‌ಗಳಿಗೆ ಹಾನಿಗಳಾಗಿವೆ. ಈ ಪರಿಹಾರ ಪ್ಯಾಕೆಜ್‌ ಭಾಗವಾಗಿ ಹಾನಿಗೊಳಗಾಗಿರುವ 100 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ದೋಣಿಗಳ ಮೀನುಗಾರರಿಗೆ ಒಟ್ಟು ₹25 ಕೋಟಿ ಪರಿಹಾರ ನೀಡಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಸಣ್ಣ ದೋಣಿಯ ಮೌಲ್ಯದ ಶೇಕಡ 50ರಷ್ಟು ಅಥವಾ ₹75,000 ಹಣವನ್ನು ಸರ್ಕಾರ ಭರಿಸಲಿದೆ. ಭಾಗಶಃ ಹಾನಿಗೊಳಗಾಗಿರುವ ದೋಣಿಗೆ ಶೇಕಡ 50ರಷ್ಟು ಅಥವಾ ₹35,000 ಸರ್ಕಾರ ನೀಡಲಿದೆ. ಇನ್ನೂ ಸಂಪೂರ್ಣ ಹಾನಿಗೊಳಗಾದ ಟ್ರಾಲರ್‌ಗೆ ₹ 5 ಲಕ್ಷ ಅಥವಾ ಅದರ ಶೇಕಡ 50ರಷ್ಟು ಪಾಲನ್ನು ಸರ್ಕಾರವೇ ನೀಡಲಿದೆ. ಅಲ್ಲದೆ ಹಾನಿಗೊಳಗಾಗಿರುವ ಸಣ್ಣ ಮತ್ತು ದೊಡ್ಡ ದೋಣಿಯ ಮೀನುಗಾರರ ಖಾತೆಗೆ ಸರ್ಕಾರ ₹2000 ವರ್ಗಾಯಿಸಲಿದೆ’ ಎಂದು ಪ್ರಕಟಣೆ ಹೇಳಿದೆ.

‘ಸಂಪೂರ್ಣ ಹಾನಿಗೊಳಗಾದ ದೋಣಿಯ ರಿಪೇರಿಗಾಗಿ ₹10 ಲಕ್ಷ ಸಾಲ ತೆಗೆದುಕೊಂಡರೆ, ಅದರ ಶೇಕಡ 10ರಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಚಂಡಮಾರಯತದಿಂದ ಹಾನಿಗೊಳಗಾದ ನವಾ, ಸೈಯದ್‌ ರಾಜ್‌ಪಾರಾ ಮತ್ತು ಶಿಯಾಲ್‌ ಬೆಟ್‌ ದ್ವೀಪದಲ್ಲಿ ಮರು ನಿರ್ಮಾಣ ಕಾರ್ಯಗಳನ್ನು ನಡೆಸಲಾಗುವುದು. ಬಂದರು ಮರು ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ₹80 ಕೋಟಿ ವೆಚ್ಚ ಮಾಡಲಿದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT