ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವರ್ಗಾವಣೆ: ಕೇಂದ್ರದ ವಿರುದ್ಧ ದೆಹಲಿ ಸರ್ಕಾರ ಮತ್ತೆ ಅರ್ಜಿ

Published 12 ಮೇ 2023, 19:33 IST
Last Updated 12 ಮೇ 2023, 19:33 IST
ಅಕ್ಷರ ಗಾತ್ರ

ನವದೆಹಲಿ: ನಮ್ಮ ಅಧಿಕಾರದ ವ್ಯಾಪ್ತಿಗೆ ಬರುವ ಅಧಿಕಾರಿಗಳ ವರ್ಗಾವಣೆಯನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ದೆಹಲಿ ಸರ್ಕಾರವು ಶುಕ್ರವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ಸಾರ್ವಜನಿಕ ಭದ್ರತೆ, ಪೊಲೀಸ್‌ ಮತ್ತು ಭೂಮಿಯ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ದೆಹಲಿಯ ಚುನಾಯಿತ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರಗಳನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರವಷ್ಟೇ ತೀರ್ಪು ನೀಡಿತ್ತು. ತೀರ್ಪು ಬಂದ ಕೆಲವೇ ಗಂಟೆಗಳಲ್ಲಿ, ದೆಹಲಿ ಸರ್ಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರೆ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಬೇರೊಬ್ಬ ಅಧಿಕಾರಿಯನ್ನು ಆ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಆದರೆ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಸಲ್ಲಿಸಿರುವ ಅರ್ಜಿಯಲ್ಲಿ ದೆಹಲಿ ಸರ್ಕಾರವು, ‘ನಾವು ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಇದು ಸುಪ್ರೀಂ ಕೋರ್ಟ್‌ ಗುರುವಾರ ನೀಡಿದ್ದ ತೀರ್ಪಿಗೆ ವಿರುದ್ಧವಾದುದು. ಅದರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಬಹುದು. ಆದರೆ, ಅದಕ್ಕೆ ಸಮಯ ತಗಲುತ್ತದೆ. ಹೀಗಾಗಿ ಈ ಅರ್ಜಿಯನ್ನು ತಕ್ಷಣವೇ ಪರಿಗಣಿಸಬೇಕು’ ಎಂದು ಕೋರಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ಪೀಠವು ದೆಹಲಿ ಸರ್ಕಾರದ ಈ ಮನವಿಯನ್ನು ಪರಿಗಣಿಸಿತು. ಅರ್ಜಿಯ ವಿಚಾರಣೆಗೆ ಮುಂದಿನ ವಾರ ಪೀಠವನ್ನು ರಚಿಸಲಾಗುತ್ತದೆ ಎಂದು ಹೇಳಿತು.

‘ಎಲ್‌ಜಿಗೆ ನಾಮನಿರ್ದೇಶನದ ಅಧಿಕಾರವಿಲ್ಲ’

ದೆಹಲಿ ನಗರ ಪಾಲಿಕೆಗೆ (ಎಂಸಿಡಿ) ಸದಸ್ಯರನ್ನು ನಾಮನಿರ್ದೇಶನ ಮಾಡುವಲ್ಲಿ ಲೆಫ್ಟಿನೆಂಟ್‌ ಗವರ್ನರ್ (ಎಲ್‌ಜಿ) ಅವರು ಚುನಾಯಿತ ಸರ್ಕಾರದ ಸಚಿವ ಸಂಪುಟದ ಸಹಾಯ ಮತ್ತು ಸಲಹೆಗಳಂತೆ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದೆಹಲಿ ಎಂಸಿಡಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು 10 ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದರು. ಇದು ದೆಹಲಿ ಮಹಾನಗರ ಪಾಲಿಕೆ ಕಾಯ್ದೆಯ ಉಲ್ಲಂಘನೆ. ದೆಹಲಿ ಸಚಿವ ಸಂಪುಟದ ಸಹಾಯ ಮತ್ತು ಸಲಹೆಯ ಮೇರೆಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕು ಎಂದು ದೆಹಲಿಯ ಎಎಪಿ ಸರ್ಕಾರ ವಾದಿಸಿತ್ತು.

ದೆಹಲಿ ಸರ್ಕಾರದ ವಾದವನ್ನು ಪರಿಗಣಿಸಿದ ಪೀಠವು, ‘ಎಂಸಿಡಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್‌ಗೆ ಇಲ್ಲ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT