ಕೊಚ್ಚಿ: ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಆನೆಯ ಹತ್ಯೆ ಕುರಿತ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆನೆಯ ಹತ್ಯೆ ವಿಷಯ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.ಕೆಲ ದುಷ್ಕರ್ಮಿಗಳು ಅನಾನಸ್ ಜತೆ ಪಟಾಕಿಗಳನ್ನು ಸೇರಿಸಿ ಆನೆಗೆ ನೀಡಿದ್ದರು. ಇದನ್ನು ಸೇವಿಸಿದಾಗ ಪಟಾಕಿಗಳು ಬಾಯಿಯಲ್ಲಿ ಸ್ಫೋಟಗೊಂಡ ಪರಿಣಾಮ ತೀವ್ರ ಗಾಯಗೊಂಡಿದ್ದ ಆನೆಯು ಮೇ 27ರಂದು ವೆಲ್ಲಿಯಾರ್ ನದಿಯ ನೀರಲ್ಲೇ ನಿಂತು ದಾರುಣ ಸಾವು ಕಂಡಿತ್ತು.

ಹಲವು ಅನುಮಾನಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ಆನೆಯ ಕೆಳಗಿನ ದವಡೆಗೆ ಪಟಾಕಿ ತುಂಬಿದ್ದ ಅನಾನಸ್ನಿಂದಲೇ ಗಾಯವಾಗಿದೆ ಎನ್ನುವುದಕ್ಕೆ ಖಚಿತ ಸಾಕ್ಷ್ಯಗಳು ದೊರೆತಿಲ್ಲ. ಆದರೆ, ಇದೇ ಕಾರಣದಿಂದಲೂ ಗಾಯವಾಗಿರುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಈ ಪ್ರಕರಣದ ಕುರಿತು ತನಿಖೆ ನಡೆಸಲು ವನ್ಯಜೀವಿ ಅಪರಾಧ ತನಿಖಾ ತಂಡವನ್ನು ಪಾಲಕ್ಕಾಡ್ ಜಿಲ್ಲೆಯ ಮಣ್ಣರ್ಕಾಡ್ ಅರಣ್ಯ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ಮೂವರು ಶಂಕಿತರನ್ನು ಪತ್ತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಂಡನೆ: ಉದ್ಯಮಿ ರತನ್ ಟಾಟಾ, ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಗರ್ಭಿಣಿ ಆನೆಯ ಹತ್ಯೆಯನ್ನು ಖಂಡಿಸಿದ್ದಾರೆ.

‘ಅಮಾಯಕ ಗರ್ಭಿಣಿ ಆನೆಯ ಹತ್ಯೆಯ ಪ್ರಕರಣವನ್ನು ಕೇಳಿ ಆಘಾತ ಮತ್ತು ದುಃಖವಾಯಿತು. ಅಮಾಯಕ ಪ್ರಾಣಿಗಳ ವಿರುದ್ಧದ ಇಂತಹ ಕ್ರಿಮಿನಲ್ ಕೃತ್ಯಗಳು, ಮನುಷ್ಯರ ವಿರುದ್ಧದ ಪೂರ್ವನಿಯೋಜಿತ ಕೊಲೆಗಿಂತ ಭಿನ್ನವಾಗಿರುವುದಿಲ್ಲ. ನ್ಯಾಯ ದೊರೆಯಲೇಬೇಕು’ ಎಂದು ಉದ್ಯಮಿ ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.

ಸಮಗ್ರ ವರದಿ ಕೋರಿದ ಕೇಂದ್ರ
ನವದೆಹಲಿ: ಆನೆ ಹತ್ಯೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಸರ್ಕಾರದಿಂದ ಸಮಗ್ರ ವರದಿ ಕೇಳಿದೆ.

‘ಪಟಾಕಿಗಳನ್ನು ಸೇವಿಸಲು ನೀಡಿ ಆನೆಯನ್ನು ಹತ್ಯೆ ಮಾಡುವುದು ಭಾರತೀಯ ಸಂಸ್ಕೃತಿ ಅಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಸ್ಫೋಟಕಗಳಿಂದ ಆನೆಗಳ ಹತ್ಯೆ; ಕೇರಳದಲ್ಲಿ ಹೊಸತಲ್ಲ
ತಿರುವನಂತಪುರ: ಸ್ಫೋಟಕಗಳು, ವಿಷ ಮತ್ತು ವಿದ್ಯುತ್ ತಂತಿಗಳಿಂದ ವನ್ಯ ಜೀವಿಗಳನ್ನು ಹತ್ಯೆ ಮಾಡುವುದು ಕೇರಳದಲ್ಲಿ ಸಾಮಾನ್ಯವಾಗಿದೆ. ಇದು ಹೊಸ ಪ್ರಕರಣವಲ್ಲ ಎಂದು ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರು ಮತ್ತು ಅರಣ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಕೊಚ್ಚಿಯಿಂದ 50 ಕಿಲೋ ಮೀಟರ್ ದೂರದಲ್ಲಿರುವ ಕಲಾದಿ ಅರಣ್ಯ ವಲಯದ ಬಾಳೆ ತೋಟದಲ್ಲಿ ಗರ್ಭಿಣಿಯಾಗಿದ್ದ 15 ವರ್ಷದ ಆನೆ ಪಟಾಕಿಗಳಿದ್ದ ಹಣ್ಣುಗಳನ್ನು ಸೇವಿಸಿ ಸ್ಥಳದಲ್ಲಿ ಮೃತಪಟ್ಟಿತ್ತು. ಕಾಡು ಹಂದಿಯನ್ನು ಹಿಡಿಯಲು ಈ ಸಂಚು ರೂಪಿಸಲಾಗಿತ್ತು ಎನ್ನುವುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿತ್ತು. ಬಾಳೆ ತೋಟದ ಮಾಲೀಕನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.

ಕಳೆದ ವರ್ಷ ಏಪ್ರಿಲ್ನಲ್ಲಿ ಕೊಲ್ಲಂ ಜಿಲ್ಲೆಯಲ್ಲಿ ಆನೆಯೊಂದು ಸಾವಿಗೀಡಾಗಿತ್ತು. ಬಾಯಿಗೆ ಗಾಯವಾದ ಪರಿಣಾಮ ಈ ಆನೆ ಸಾವಿಗೀಡಾಗಿತ್ತು. ಈಗ ನಡೆದಿರುವ ಪ್ರಕರಣವೂ ಇದೇ ರೀತಿಯಾಗಿದೆ. ಕಾಡು ಹಂದಿಯನ್ನು ಸಾಯಿಸಲು ಈ ಕೃತ್ಯ ನಡೆಸಿರಬಹುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಆದರೆ, ಕೇರಳ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಎಂ.ಎಣ್. ಜಯಚಂದ್ರನ್, ಈ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಡು ಹಂದಿಗಳನ್ನು ಮಾಂಸದಲ್ಲಿ ಸ್ಫೋಟಕಗಳನ್ನಿಟ್ಟು ಸಾಯಿಸಲಾಗುತ್ತದೆ. ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಆನೆಯನ್ನು ಸಾಯಿಸಲಾಗಿದೆ ಎಂದು ವಿವರಿಸಿದ್ದಾರೆ.

ಬಂಧನಕ್ಕೆ ನೆರವಾದರೆ ₹2 ಲಕ್ಷ ಬಹುಮಾನ ಘೋಷಿಸಿದ ಉದ್ಯಮಿ
ಹೈದರಾಬಾದ್: ಗರ್ಭಿಣಿ ಆನೆಯನ್ನು ಸಾಯಿಸಿದವರನ್ನು ಬಂಧಿಸಲು ನೆರವಾದವರಿಗೆ ₹2 ಲಕ್ಷ ಬಹುಮಾನ ನೀಡುವುದಾಗಿ ಇಲ್ಲಿನ ಉದ್ಯಮಿ ಮತ್ತು ರೈತ ಬಿ.ಟಿ. ಶ್ರೀನಿವಾಸನ್ ಘೋಷಿಸಿದ್ದಾರೆ.

’ಇದೊಂದು ಹೇಯ ಕೃತ್ಯ. ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು. ಮಹತ್ವದ ಕೊಲೆ ಪ್ರಕರಣಗಳಲ್ಲಿ ಮಾತ್ರ ಪೊಲೀಸರು ಬಹುಮಾನ ಘೋಷಿಸುತ್ತಾರೆ. ಹೀಗಾಗಿ, ಈ ಬಹುಮಾನದಿಂದಾಗಿ ಯಾರಾದರೂ ಮಾಹಿತಿ ನೀಡಿ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಗಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

ಪ್ರಾಣಿಗಳ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್ ಸಂಸ್ಥೆಯು ಸಹ ಮಾಹಿತಿ ನೀಡುವವರಿಗೆ ₹50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.